ಚಿತ್ರದುರ್ಗ: ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರಕ್ಕೆ ಜಿಲ್ಲಾ ರೆಡ್ಡಿ ಜನ ಸಂಘ ಅತಿ ಹೆಚ್ಚು ಮೊತ್ತವನ್ನು ಖರ್ಚು ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸರ್ಕಾರಿ ಅಽಕಾರಿ, ಸಿಬ್ಬಂದಿಯ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮುದಾಯದ ಮಕ್ಕಳ ಶಿಕ್ಷಣ ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಹಿರಿಯರು ಈ ಸಂಘ ಸ್ಥಾಪಿಸಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿಯ ೧೨೦, ದ್ವಿತೀಯ ಪಿಯುಸಿಯ ೧೯೧ ವಿದ್ಯಾರ್ಥಿಗಳಿಗೆ ತಲಾ ೧೦ ಸಾವಿರ ರೂ. ಹಾಗೂ ೧೫ ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗಿದೆ. ಇದಕ್ಕಾಗಿ ಅಂದಾಜು ೫೦ ಲಕ್ಷ ರೂ. ವೆಚ್ಚವಾಗಿದೆ. ಕ್ರೀಡೆಯಲ್ಲೂ ಉತ್ತಮ ಸಾಧನೆ ತೋರುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಘದಿಂದ ನಾನಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಉದ್ದೇಶವಿದೆ. ದಾವಣಗೆರೆ ಹೃದಯಭಾಗದಲ್ಲಿರುವ ಅಂದಾಜು ೧೦ ಸಾವಿರ ಚದರಡಿ ವಿಸ್ತೀರ್ಣದಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ, ಹಾಸ್ಟೆಲ್ ನಿರ್ಮಿಸುವ ಉದ್ದೇಶವಿದೆ. ಚಳ್ಳಕೆರೆಯಲ್ಲಿರುವ ಸಂಘದ ಕಟ್ಟಡದ ಅಭಿವೃದ್ಧಿ ಕುರಿತು ಯೋಜಿಸಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ ಸಂಘದಿಂದ ವಸತಿ ಶಿಕ್ಷಣ ಶಾಲೆ ಸ್ಥಾಪಿಸಲು ೫ ಕೋಟಿ ರೂ.ವೆಚ್ಚದಲ್ಲಿ ೯ ಎಕರೆ ಜಮೀನು ಖರೀದಿಸಲಾಗಿದೆ. ಇನ್ಕಂ ಟ್ಯಾಕ್ಸ್ ಇಲಾಖೆ ಪ್ರಕರಣ ಬಗೆಹರಿದಿದ್ದು, ೨೨ ಲಕ್ಷ ರೂ. ಸಂಘಕ್ಕೆ ಮರಳಲಿದೆ. ಜಗಳೂರು ಕಟ್ಟಡದಿಂದಲೂ ಆದಾಯ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳಿಗಾಗಿ ಬೈಲಾ ತಿದ್ದುಪಡಿ ಮೂಲಕ ಸಂಘವನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶವಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.
ಉಪಾಧ್ಯಕ್ಷ ಎಂ.ಕೆ. ಅನಂತ ರೆಡ್ಡಿ ಸ್ವಾಗತಿಸಿ, ಕಾರ್ಯದರ್ಶಿ ಜೆ. ಪರಶುರಾಮ ವಂದಿಸಿದರು. ಖಜಾಂಚಿ ಜಿ.ವೈ. ಸುರೇಶ್ಕುಮಾರ್, ನಿರ್ದೇಶಕರಾದ ಡಾ.ಎಸ್. ಸದಾಶಿವರೆಡ್ಡಿ, ಕೆ.ವಿ. ರಾಮಕೃಷ್ಣ, ವಿ.ಆರ್. ಮಂಜುನಾಥ್, ಕೆ.ಎಚ್. ಸುದರ್ಶನರೆಡ್ಡಿ, ಪಿ. ಚಂದ್ರರೆಡ್ಡಿ, ಡಾ.ಪಿ.ಟಿ. ಚಂದ್ರಹಾಸ್, ಡಾ.ಕೆ.ಜಿ. ರಾಘವರೆಡ್ಡಿ, ಎಸ್. ನಾಗರಾಜ್, ಜಿ.ಟಿ. ತಿಪ್ಪೇಶ್, ಆರ್.ಎನ್. ವೇಣುಗೋಪಾಲ್, ಆರ್.ವಿ. ಮಾರುತೇಶ್ ರೆಡ್ಡಿ, ಡಾ.ಎಸ್.ಎನ್. ಹರೀಶ್, ಸುಜಾತಾ, ರೂಪಾ, ಸುಮನಾ, ರೇಖಾ, ಇಂದಿರಮ್ಮ, ಎಂ.ಎನ್. ಶೀಲಾ, ಜಿ.ಟಿ. ತಿಪ್ಪಾರೆಡ್ಡಿ ಮತ್ತಿತರ ಸಂಘದ ವ್ಯಾಪ್ತಿ ಜಿಲ್ಲೆಗಳ ಪ್ರಮುಖರು ಇದ್ದರು.
ಕೆ.ಟಿ.ತಿಮ್ಮಾರೆಡ್ಡಿ, ಸಾಯಿ ನಿಖಿತಾ ಎಂ. ಅವರು ನಿರೂಪಿಸಿದರು. ರಾಜ್ಯಮಟ್ಟದ ೧೪ ವರ್ಷದೊಳಗಿನ ಮುಕ್ತ ಟೇಕ್ವಾಂಡೊ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಪಡೆದ ನಿಖಿತಾ ಅವರನ್ನು ಗೌರವಿಸಲಾಯಿತು.
ಸಮಾರಂಭದ ಬಳಿಕ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಜರುಗಿತು.
ಉತ್ತಮ ಭವಿಷ್ಯ ರೂಪಿಸಿಕೊಳ್ಳಿ
ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳು ಗಮನಕೊಡಬೇಕು ಎಂದು ಸಂಘದ ಕಾರ್ಯದರ್ಶಿ ಡಿ.ಕೆ. ಶೀಲಾ ಕಿವಿಮಾತು ಹೇಳಿದರು. ತಪ್ಪು ಹೆಜ್ಜೆ ಇಡದೆ, ಉತ್ತಮ ವಿದ್ಯಾಭ್ಯಾಸ ರೂಢಿಸಿಕೊಳ್ಳುವುದರೊಂದಿಗೆ ಶಿಕ್ಷಣದ ಗುರಿ ತಲುಪಿ, ಪಾಲಕರು ಹೆಮ್ಮೆಪಡುವಂತೆ ವೃತ್ತಿ ಜೀವನ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುರಿ ಸಾಽಸಿದರೆ , ಹಣ, ಕೀರ್ತಿ ಎಲ್ಲವನ್ನೂ ಗಳಿಸಬಹುದು. ಆದ್ದರಿಂದ ಇಂಥ ಸಮಯದಲ್ಲಿ ಗೊಂದಲಕ್ಕೆ ಒಳಗಾಗಿದೆ ಗುರಿ ಸಾಧನೆಯತ್ತ ಗಮನಕೊಡಬೇಕು ಎಂದು ತಿಳಿಸಿದರು.