ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಅವರೊಂದಿಗೆ ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ, ವೀರೇಂದ್ರ ಪಪ್ಪಿ, ಡಾ.ಎಂ. ಚಂದ್ರಪ್ಪ, ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಭದ್ರಾವತಿ ಸಮೀಪದ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಿಸಿದರು.
- ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿಕೆ
- ಜಿಲ್ಲೆಯ ಶಾಸಕರು, ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಣೆ
ಪರಶುರಾಮಪುರ: ಚಿತ್ರದುರ್ಗದಂತಹ ಬಯಲುಸೀಮೆಗೆ ಭದ್ರಾಮೇಲ್ದಂಡೆ ಯೋಜನೆ ಅತ್ಯುಪಯುಕ್ತವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯ ಶಾಸಕರಾದ ಟಿ. ರಘುಮೂರ್ತಿ, ವೀರೇಂದ್ರ ಪಪ್ಪಿ, ಡಾ.ಎಂ. ಚಂದ್ರಪ್ಪ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಇನ್ನಿತರ ಅಧಿಕಾರಿಗಳೊಂದಿಗೆ ಶನಿವಾರ ಭದ್ರಾವತಿ ಬಳಿಯ ಭದ್ರಾ ಜಲಾಶಯದ ಬಳಿಗೆ ತೆರಳಿ ಯೋಜನೆ ಕಾಮಗಾರಿ ವೀಕ್ಷಿಸಿ ಸುದ್ದಿಗಾರರ ಜತೆ ಮಾತನಾಡಿದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ರೈತರಿಗೆ ವರದಾನವಾಗಿರುವ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮುಗಿಸಲು ಸರ್ಕಾರಗಳು ನಿಯಮಿತವಾಗಿ ಅನುದಾನ ನೀಡಿ ಸಹಕರಿಸಬೇಕು. ಪಕ್ಷಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಯೋಜನೆಯನ್ನು ಕಾರ್ಯಗತಗೊಳಿಸಲು ಶ್ರಮಿಸಬೇಕಾಗಿದೆ. ಯೋಜನೆಯಿಂದ ಜನ, ಜಾನುವಾರು ಕುಡಿವ ನೀರಿಗೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.
ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಬಯಲುಸೀಮೆ ರೈತರ ಬದುಕನ್ನು ಹಸನುಗೊಳಿಸಲು ಈ ಯೋಜನೆ ತುಂಬಾ ಉಪಯುಕ್ತವಾಗಿದೆ. ಎಲ್ಲೆಲ್ಲಿ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿರುವ, ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದ್ದರೆ ಈ ಅಂಶವನ್ನು ಶಾಸಕರ ನಿಯೋಗ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು ಎಂದರು.
ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ರೈತರು ಸತತ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲ ತಾಲೂಕುಗಳಲ್ಲಿ ರೈತರ ಜೀವನ ನಡೆಸುವುದೇ ಕಷ್ಟವಾಗಿದೆ. ಕೂಡಲೇ ಎರಡೂ ಸರ್ಕಾರಗಳು ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಕೊಡಬೇಕು ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಯೋಜನೆ ಎಲ್ಲ ಹಂತದ ಅಧಿಕಾರಿಗಳು ವೈಜ್ಞಾನಿಕವಾಗಿ ಕಾಮಗಾರಿ ಪೂರ್ಣಗೊಳಿಸಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ಕೆಲವೆಡೆಗಳಲ್ಲಿ ಕಾಮಗಾರಿ ಹಿನ್ನಡೆಯಗಿತ್ತು. ರಾಜ್ಯ ಸರ್ಕಾರ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಿದೆ ಎಂದರು.