irrigation ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಐಮಂಗಲ ಹೋಬಳಿ ನೀರಾವರಿ ಹೋರಾಟ ಸಮಿತಿ-ರೈತರ ಸಭೆ ನಡೆಯಿತು. ಶಾಸಕ ವೀರೇಂದ್ರ ಪಪ್ಪಿ, ಮಾಜಿ ಶಾಸಕಿ ಕೆ.ಪೂರ್ಣಿಮಾ, ಲಕ್ಷ್ಮೀಕಾಂತ್ ಇತರರಿದ್ದರು. 
ಚಿತ್ರದುರ್ಗ

ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧ irrigation

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಐಮಂಗಲ ವ್ಯಾಪ್ತಿಯ ಕೆರೆಗಳಿಗೆ ಶೀಘ್ರ ಭದ್ರೆ ನೀರು
  • ಮಾಜಿ ಶಾಸಕಿ ಕೆ. ಪೂರ್ಣಿಮಾ ಭರವಸೆ
  • ಕಾಮಗಾರಿ ಪ್ರಗತಿ ಪರಿಶೀಲನೆಗೆ ಡಿಸಿಎಂ ಭೇಟಿ

ಹಿರಿಯೂರು: "ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸಿ, ಶೀಘ್ರ ಐಮಂಗಲ ಹೋಬಳಿ ಸೇರಿದಂತೆ ಜಿಲ್ಲೆಯ ಇತರ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ" ಎಂದು ಮಾಜಿ ಶಾಸಕಿ ಕೆ. ಪೂರ್ಣಿಮಾ ಹೇಳಿದರು. irrigation

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಐಮಂಗಲ ಹೋಬಳಿ ನೀರಾವರಿ ಹೋರಾಟ ಸಮಿತಿ ಹಾಗೂ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

"ಐಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಜನ-ಜಾನುವಾರುಗಳು ಹನಿ ನೀರಿಗೂ ಪರಿತಪಿಸುವಂತಾಗಿದೆ. ರೈತರು ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಎದುರಾಗಿದೆ. ಇಲ್ಲಿನ ಪರಿಸ್ಥಿತಿ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದು, ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ, ಚಿತ್ರದುರ್ಗ ಶಾಖಾ ನಾಲೆ ತಾಂತ್ರಿಕ ಸಮಸ್ಯೆ ಪರಿಹರಿಸಲು ಡಿಸಿಎಂ ಅವರು ಶೀಘ್ರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ" ಎಂದರು.

"ಜಿಲ್ಲೆಯ ಎಲ್ಲ ಶಾಸಕರು ನೀರಾವರಿ ವಿಚಾರದಲ್ಲಿ ಬದ್ಧತೆ ತೋರಿದ್ದು, ರೈತರು ತಾಳ್ಮೆ ವಹಿಸಬೇಕು. ನೀರಾವರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆ ಇದ್ದು, ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟು ಕಾಮಗಾರಿಗೆ ವೇಗ ನೀಡಿದ್ದರಿಂದ ಇಂದು ಭದ್ರೆ ನೀರು ಬಯಲು ಸೀಮೆ ಸ್ಪರ್ಶಿಸಿದೆ. ಈಗಾಗಲೇ ಐಮಂಗಲ ಹೋಬಳಿ ನೀರಿನ ಸಮಸ್ಯೆ ಕುರಿತು ವಿಶ್ವೇಶ್ವರಯ್ಯ ಜಲ ನಿಗಮದ (ವಿಜೆಎನ್‌ಎಲ್) ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ನೀರಿನ ಸಂಕಷ್ಟದ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಸರ್ಕಾರಕ್ಕೆ ನೀರಾವರಿ ವಿಚಾರದಲ್ಲಿ ಬದ್ಧತೆ, ಜೀವ ಪರ ಕಾಳಜಿ ಇದೆ" ಎಂದು ತಿಳಿಸಿದರು.

ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿ, "ಐಮಂಗಲ ಹೋಬಳಿಯ ನೀರಿನ ಸಮಸ್ಯೆ ಪರಿಹರಿಸುವಂತೆ ನೀರಾವರಿ ಹೋರಾಟ ಸಮಿತಿ, ರೈತರು ಮನವಿ ಮಾಡಿದ್ದರು. ಇಲ್ಲಿನ ರೈತರು, ಜನರ ಮೇಲಿನ ಕಾಳಜಿಯಿಂದ ನಾನು ಇಲ್ಲಿಗೆ ಬಂದಿದ್ದು, ಕೆಲವರು ರಾಜಕೀಯ ಕಾರಣಕ್ಕೆ ವಿರೋಧಿಸಿದರು" ಎಂದು ಬೇಸರಿಸಿದರು.

"ಹಿರಿಯೂರಿನ ರಾಜಕಾರಣದಲ್ಲಿ ನಾನು ಅನಗತ್ಯವಾಗಿ ಮೂಗು ತೂರಿಸುವುದಿಲ್ಲ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ. ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇಲ್ಲ. ಐಮಂಗಲ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಸುಧಾಕರ್ ಅವಿರತ ಶ್ರಮ ಹಾಕಿದ್ದರು. ಅವರ ಕನಸು ನನಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜಿಲ್ಲೆಯ ಎಲ್ಲ ಶಾಸಕರೂ ಒಗ್ಗೂಡಿ ಅಭಿವೃದ್ಧಿಯ ರಥ ಎಳೆಯಲಾಗುವುದು" ಎಂದು ಹೇಳಿದರು.

ಕೈ ಕಾರ್ಯಕರ್ತರ ಅಸಮಾಧಾನ: ಐಮಂಗಲ ಹೋಬಳಿ ವ್ಯಾಪ್ತಿಯ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನೆ, ಸಮಸ್ಯೆ ಪರಿಹಾರಕ್ಕೆ ಶಾಸಕ ವೀರೇಂದ್ರ ಪಪ್ಪಿ ಹಾಗೂ ಮಾಜಿ ಶಾಸಕಿ ಕೆ.ಪೂರ್ಣಿಮಾ ಭೇಟಿ ನೀಡುವ ವಿಷಯ ಬ್ಲಾಕ್ ಕಾಂಗ್ರೆಸ್, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಗಮನಕ್ಕೆ ತಂದಿಲ್ಲ. ಡಿ. ಸುಧಾಕರ್ ವಿಧಿವಶರಾಗಿ ಒಂದು ವಾರ ಕಳೆದಿಲ್ಲ. ಈಗಾಗಲೇ ರಾಜಕೀಯ ಮಾಡಲಾಗುತ್ತಿದೆ. ಕೆಲವರು ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಲ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ವೀರೇಂದ್ರ ಪಪ್ಪಿ ಮತ್ತು ಮಾಜಿ ಶಾಸಕಿ ಪೂರ್ಣಿಮಾ ಅವರು ಫೋನ್ ಮೂಲಕ ವಿಜೆಎನ್ಎಲ್ ಎಂಡಿ ಸಣ್ಣಚಿತ್ತಯ್ಯ ಅವರನ್ನು ಸಂಪರ್ಕಿಸಿ, ಐಮಂಗಲ ಹೋಬಳಿ ವ್ಯಾಪ್ತಿಯ ನೀರಿನ ಹಾಹಾಕಾರ, ಭದ್ರಾ ಮೇಲ್ದಂಡೆ ಯೋಜನೆ ಶಾಖಾ ನಾಲೆ ತಾಂತ್ರಿಕ ಸಮಸ್ಯೆ ಕುರಿತು ಮನವರಿಕೆ ಮಾಡಿದರು. "ಮೇ 23ಕ್ಕೆ ಸ್ಥಳಕ್ಕೆ ಭೇಟಿ ನೀಡಲಾಗುವುದು, ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು" ಎಂದು ಸಣ್ಣಚಿತ್ತಯ್ಯ ಭರವಸೆ ನೀಡಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ತಾಲೂಕಾಧ್ಯಕ್ಷ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಮಾಜಿ ಅಧ್ಯಕ್ಷ ಟ.ಚಂದ್ರಶೇಖರ್, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ತಿಪ್ಪೀರಣ್ಣ, ಈರಲಿಂಗೇಗೌಡ, ಕಲ್ಲಹಟ್ಟಿ ಹರೀಶ್, ಅಶೋಕ್, ಗುರುಪ್ರಸಾದ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಕಿರಣ್, ಜ್ಞಾನೇಶ್, ಮಣಿ, ಅರುಣ್, ಯತೀಶ್ ಇತರರಿದ್ದರು.