ಸಾಣೇಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ 20 ದಿನಗಳ ಯುವಜನ ರಂಗತರಬೇತಿ ಶಿಬಿರ ಹಾಗೂ ಅಮ್ಮತಾಯಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ , ಸದಸ್ಯ ಲವಕುಮಾರ, ವೆಂಕಟೇಶ ಇತರರಿದ್ದರು. 
ಚಿತ್ರದುರ್ಗ

ಜನರಿಗೆ ಉದ್ಯೋಗ ಕೊಟ್ಟು ಸ್ವಾವಲಂಬಿಗಳನ್ನಾಗಿ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ
  • ಯುವಜನ ರಂಗ ತರಬೇತಿ ಶಿಬಿರ
ಹೊಸದುರ್ಗ: ಸರ್ಕಾರಗಳು ಉಚಿತ ಯೋಜನೆಗಳ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡಿ ಅವರ ದುಡಿಮೆ ಕಸಿದುಕೊಳ್ಳುತ್ತಿರುವುದು ನೋವಿನ ಸಂಗತಿ. ಅದರ ಬದಲು ಜನರಿಗೆ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿದ್ದ 20 ದಿನಗಳ ಯುವಜನ ರಂಗ ತರಬೇತಿ ಶಿಬಿರ ಹಾಗೂ ಅಮ್ಮತಾಯಿ‘ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಹಸಿವಿಗಾಗಿ ತಪ್ಪುದಾರಿ ತುಳಿಯದಂತೆ ತಡೆಯಲು ಅವನಿಗೆ ಅನ್ನ ಕೊಡುವುದಕ್ಕಿಂತ, ಅನ್ನ ಸಂಪಾದಿಸುವ ಕಾಯಕವನ್ನು ಕಲಿಸಬೇಕು. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಇಂದಿನ ರಾಜಕೀಯ ವ್ಯವಸ್ಥೆ ಕಾಯಕ ಸಂಸ್ಕೃತಿಯನ್ನೇ ಹಾಳುಮಾಡುತ್ತಿದೆ. ಸಮಾಜದಲ್ಲಿ ಆಧುನಿಕ ಭಸ್ಮಾಸುರರು ಹೆಚ್ಚಾಗುತ್ತಿದ್ದಾರೆ. ಸಂಪತ್ತಿನ ಹಿಂದೆ ಬಿದ್ದು ಮನುಷ್ಯ ಹಾಳಾಗುತ್ತಿದ್ದಾನೆ ಎಂದರು.
ರಂಗಭೂಮಿ ಕೇವಲ ರಂಜನೆಯಾಗದೆ, ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣ ಕಲಿಸಬೇಕು. ಬಸವಣ್ಣ ಹೇಳಿದಂತೆ ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ ಎಂಬ ತತ್ವದಂತೆ ಬದುಕುವುದೇ ನಿಜವಾದ ಪೂಜೆಯಾಗಿದೆ. ಸಮಾಜದಲ್ಲಿ ಕ್ರಾಂತಿಕಾರಕ ವಿಚಾರಗಳನ್ನು ಬಿತ್ತುವ ಕೆಲಸವನ್ನು ರಂಗಭೂಮಿ ಮಾಡಬೇಕಿದೆ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ಡಾಕ್ಟರ್, ಇಂಜಿನಿಯರ್ ಅಥವಾ ಐಎಎಸ್ ಅಧಿಕಾರಿಗಳನ್ನು ಸೃಷ್ಟಿಸಬಹುದು. ಆದರೆ, ರಂಗಭೂಮಿ ಮನುಷ್ಯನನ್ನು ಸೃಷ್ಟಿಸುತ್ತದೆ. ಇಲ್ಲಿ ಜಾತಿ, ಧರ್ಮ, ವರ್ಣಗಳ ಭೇದವಿಲ್ಲದೆ ಒಟ್ಟಿಗೆ ಬದುಕುವುದನ್ನು, ಪರಸ್ಪರ ಪ್ರೀತಿಸುವುದನ್ನು ಕಲಿಸಲಾಗುತ್ತದೆ. ಸಾಣೇಹಳ್ಳಿಯ ಈ ರಂಗ ಶಿಬಿರದ ಮುಖ್ಯ ಉದ್ದೇಶ ಕೇವಲ ನಟರನ್ನು ತಯಾರು ಮಾಡುವುದಲ್ಲ, ಬದಲಿಗೆ ಮನುಷ್ಯತ್ವವಿರುವ ಸತ್ಪ್ರಜೆಗಳನ್ನು ರೂಪಿಸುವುದಾಗಿದೆ ಎಂದರು.
ನಾಟಕ ಅಕಾಡೆಮಿ ಸದಸ್ಯ ಲವಕುಮಾರ್ ಮಾತನಾಡಿ, ರಂಗ ಶಿಕ್ಷಣ ಶಿಬಿರ ಮುಗಿಸಿ ಹಳ್ಳಿಗಳಿಗೆ ಹಿಂತಿರುಗಿದ ಶಿಬಿರಾರ್ಥಿಗಳು ಕೇವಲ ನಟರಾಗಿ ಉಳಿಯದೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಾಯಕರಾಗಬೇಕು. ಮನೆಯಲ್ಲಿ ತಾಯಿಯ ಕೆಲಸಕ್ಕೆ ಕೈಜೋಡಿಸುವುದರಿಂದಲೇ ರಂಗಭೂಮಿಯ ನಿಜವಾದ ಯಶಸ್ಸು ಹಾಗೂ ಲಿಂಗ ಸಮಾನತೆ ಆರಂಭವಾಗುತ್ತದೆ. ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರು ಪ್ರಗತಿಪರ ಮತ್ತು ವಿಚಾರಶೀಲರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ರಾಜಪ್ಪ ದಳವಾಯಿ ರಚನೆಯ ವೆಂಕಟೇಶ್ ನಿರ್ದೇಶನದ ಅಮ್ಮತಾಯಿ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. ರಾಘು ಪರಪ್ಪಮನಿ, ವೆಂಕಟೇಶ್ ಇದ್ದರು.