ಹಿರಿಯೂರು: ಶಾಲಾ ಹಂತದಲ್ಲಿ ಗಾಂಧಾರಿ ವಿದ್ಯೆ ಕಲಿಕೆ ಮಕ್ಕಳಲ್ಲಿ ಏಕಾಗ್ರತೆ& ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಪ್ರಾಚಾರ್ಯ ಎಸ್. ಕುಮಾರಯ್ಯ ತಿಳಿಸಿದರು.
ತಾಲೂಕಿನ ಹರಿಯಬ್ಬೆ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಋಷಿ ಸಂಸತಿ ಯೋಗ ಕೇಂದ್ರ ಕುರುಮರಡಿಕೆರೆ ಸಹಯೋಗದಲ್ಲಿ ಆಯೋಜಿಸಿದ್ದ ಮಿಡ್ ಬೆನ್ ಆಕ್ಟಿವೇಷನ್ (ಗಾಂಧಾರಿ ವಿದ್ಯೆ) ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧಾರಿ ವಿದ್ಯೆ ಕಲಿತ ಮಕ್ಕಳು ಸಂಪೂರ್ಣ ಲವಲವಿಕೆಯಿಂದಿರುತ್ತಾರೆ. ಓದಿನಲ್ಲಿ ಆಸಕ್ತಿ, ನೆನಪಿನ ಶಕ್ತಿ ವೃದ್ಧಿಸುತ್ತದೆ, ಸುಪ್ತ ಮನಸ್ಸು ಜಾಗೃತಗೊಳಿಸುವ ಜತೆಗೆ ಅಂಜಿಕೆ ಸ್ವಭಾವ ಕಡಿಮೆಯಾಗುತ್ತದೆ ಎಂದರು.
ಉಪ ಪ್ರಾಚಾರ್ಯ ರುದ್ರಮನಿ ಮಾತನಾಡಿ, ಗಾಂಧಾರಿ ವಿದ್ಯೆ ನಮ್ಮ ಸನಾತನ ಧರ್ಮದಲ್ಲಿನ ಒಂದು ಅದ್ಭುತ ಕೌಶಲ. ಇಂತಹ ಶಕ್ತಿ ಸ್ವಾಮಿ ವಿವೇಕಾನಂದರು, ಮಹಾತ್ಮ ಗಾಂಧಿ ಮುಂತಾದ ಮಹಾನ್ ಸಾಧಕರಿಗೆ ಇತ್ತು. ಆದರೆ, ಇಂದಿನ ಮಕ್ಕಳು ಮೊಬೈಲ್, ಗೇಮ್ಸ್ ಗಳಿಂದ ಆಕರ್ಷಿತರಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇಂಥ ಕಾರ್ಯಕ್ರಮಗಳಿಂದ ಮನಸ್ಸು ಕೇಂದ್ರೀಕೃತವಾಗಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.
ಪಿರಮಿಡ್ ಅಕಾಡೆಮಿ ಅಧ್ಯಕ್ಷ ಜಿ.ವಿ. ಮಧುಸೂಧನ್ ಮಾತನಾಡಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ಗ್ರಾಮೀಣ ಮಟ್ಟಕ್ಕೆ ತಂದಿರುವುದು ಬಹಳ ಸಂತೋಷದಾಯಕ, ಈ ಕಾರ್ಯಕ್ರಮದಲ್ಲಿ ಪಂಚೇಂದ್ರಿಯಗಳಲ್ಲಿ ಪ್ರಧಾನವಾದ ಕಣ್ಣನ್ನು ಮುಚ್ಚಿ ಉಳಿದ ಇಂದ್ರಿಯಗಳನ್ನು ಚುರುಕುಗೊಳಿಸುವುದು ಅದ್ಭುತ ವಿಚಾರವಾಗಿದೆ. ಕಣ್ಣು ಮನುಷ್ಯನಿಗೆ ಶೇ.83 ಜ್ಞಾನ ಕೊಡುವ ಇಂದ್ರಿಯ. ಇದನ್ನು ಹೊರತುಪಡಿಸಿ ಉಳಿದ ಇಂದ್ರಿಯಗಳ ಮೂಲಕ ಮನುಷ್ಯ ತನ್ನ ನಿತ್ಯದ ಕೆಲಸ ಮಾಡುವುದು ಅಸಾಧ್ಯ. ಆದರೆ, ಅದನ್ನು ಸಾಧ್ಯವಾಗಿಸುವುದೆ ಈ ಮಿಡ್ ಬೆನ್ ಆಕ್ಟಿವೇಷನ್ನ ಮೂಲ ಉದ್ದೇಶವಾಗಿದೆ ಎಂದರು.
1500 ವರ್ಷಗಳ ಹಿಂದಿನ ನಳಂದ ವಿಶ್ವವಿದ್ಯಾಲಯದಲ್ಲಿ 90 ಲಕ್ಷ ಪುಸ್ತಕಗಳಿದ್ದವು. ಅದರಲ್ಲಿ ಭೂಮಿಯ ಆಳದಿಂದ ಆಕಾಶದ ಅಂತ್ಯದವರೆಗೆ ಅಗೋಚರ ಜ್ಞಾನಗಳನ್ನು ತಿಳಿಸುವ ಪವಾಡ ಸದೃಶ್ಯ ಸನಾತನ ಶಿಕ್ಷಣವಿತ್ತು. ಆದರೆ, ನಾವು ಅದನ್ನು ಮುಂದುವರಿಸದೆ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲಿದ್ದೇವೆ. ಇಂತಹ ಕಾರ್ಯಕ್ರಮಗಳು ಹೆಚ್ಚೆೆಚ್ಚು ನಡೆದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ತಿಳಿಸಿದರು.
ತರಬೇತಿ ಶಿಬಿರದಲ್ಲಿ ಋಷಿ ಯೋಗ ಶಿಕ್ಷಣ ಕೇಂದ್ರದ ಶ್ರೀ ಚಂದ್ರಶೇಖರ್ ಮೇಟಿ ಗುರೂಜಿ ಹಾಗೂ ಸುಮಾ ಮಾತಾಜಿ ಅವರು ಗಾಂಧಾರಿ ವಿದ್ಯೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಪ್ರಧಾನ ಆಯೋಜಕ ಏಕಾಂತಪ್ಪ ರವೀಂದ್ರ ನಿಜಲಿಂಗಪ್ಪ, ದೇವರಾಜ್, ಗೋವಿಂದರಾಯ, ವೆಂಕಟೇಶ್ ಇತರರಿದ್ದರು.