ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಬಳಿ ನಿರ್ಮಾಣ ಹಂತದ ಮಳೆಕೊಯ್ಲು ವ್ಯವಸ್ಥೆಯನ್ನು ಜಿಪಂ ಸಿಇಒ ಆಕಾಶ್ ವೀಕ್ಷಿಸಿದರು. ಎಂ.ಆರ್. ಮಂಜುನಾಥ, ವೆಂಕಟೇಶಪ್ಪ, ಇಒ ಶಶಿಧರ್, ರಾಮಚಂದ್ರಪ್ಪ, ಸಾವಿತ್ರಮ್ಮ ಇದ್ದರು. Resource
- ಜಿಪಂ ಸಿಇಒ ಆಕಾಶ್ ಎಚ್ಚರಿಕೆ
- ಬುಡ್ನಹಟ್ಟಿ ಶಾಲೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ವೀಕ್ಷಣೆ
ಪರಶುರಾಮಪುರ: ಸ್ವಾಭಾವಿಕ ಸಂಪ ನ್ಮೂಲಗಳನ್ನು ಸಂರಕ್ಷಿಸಿಕೊಳ್ಳದೇ ಹೋದರೆ ಮುಂದೊಂದು ದಿನ ನಮ್ಮೆಲ್ಲರ ಜೀವನ ನಿರ್ವಹಣೆ ದುಸ್ತರವಾಗಲಿದೆ ಎಂದು ಜಿಪಂ ಸಿಇಒ ಆಕಾಶ್ ಹೇಳಿದರು. Resource
ಚಳ್ಳಕೆರೆ ತಾಲೂಕಿನ ಭರಮಸಾಗರ ಮತ್ತು ಬುಡ್ನಹಟ್ಟಿ ಗ್ರಾಮಗಳ ಸರ್ಕಾರಿ ಶಾಲೆಗಳ ಬಳಿ ನಿರ್ಮಾಣ ಹಂತದಲ್ಲಿರುವ ಮಳೆಕೊಯ್ಲು ವ್ಯವಸ್ಥೆಯನ್ನು ಪಂಚಾಯತ್ ರಾಜ್ ಮತ್ತು ಶಾಲಾ ಶಿಕ್ಷಣ ಇಲಾಖೆ ಅನುಷ್ಠಾನಾಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನೈಸರ್ಗಿಕ ಸಂಪನ್ಮೂಲಗಳಾದ ನೀರು, ಗಾಳಿ, ಗಿಡಮರಗಳು, ವನ್ಯ ಜೀವಿಗಳು ಸೇರಿ ವಿವಿಧ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಬೇಕಿದೆ ಎಂದು ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ಶಾಲೆ, ಕಾಲೇಜು ಸೇರಿ ಸರ್ಕಾರಿ ಕಟ್ಟಡಗಳ ಮೇಲೆ ಮಳೆಕೊಯ್ಲು ಅಳವಡಿಸಿಕೊಂಡು ನೀರು ವ್ಯರ್ಥವಾಗುವುದನ್ನು ತಪ್ಪಿಸಬೇಕು. ಮಳೆ ನೀರು ಅತ್ಯಮೂಲ್ಯ. ತೊಟ್ಟಿಗಳನ್ನು ನಿರ್ಮಿಸಿ ಅದರಲ್ಲಿ ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಡಿಡಿಪಿಐ ಎಂ.ಆರ್. ಮಂಜುನಾಥ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಜಿಪಂ, ತಾಪಂ ಮತ್ತು ಗ್ರಾಪಂಗಳು ತಮ್ಮ ವ್ಯಾಪ್ತಿಯ ಗ್ರಾಮಗಳ ಶಾಲಾ, ಕಾಲೇಜಿನ ಕಟ್ಟಡಗಳ ಮೇಲೆ ಮಳೆಕೊಯ್ಲು ಅಳವಡಿಸಿಕೊಳ್ಳಬೇಕು ಎಂದರು.
ಶಾಲಾ ಶಿಕ್ಷಣ ಇಲಾಖೆ ಡಿವೈಪಿಸಿ ವೆಂಕಟೇಶಪ್ಪ ಮಾತನಾಡಿ, ನಮ್ಮ ಪೂರ್ವಜರು ಸ್ವಾಭಾವಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ ಅವುಗಳ ಸಂರಕ್ಷಣೆಗೆ ಗಮನ ನೀಡುತ್ತಿದ್ದರು. ಆದರೆ, ಇಂದಿನ ಯುವ ಪೀಳಿಗೆ ಪ್ರಾಕೃತಿಕ ಸಂಪತ್ತಿನ ಸಂರಕ್ಷಣೆ ಕಡೆಗ ಗಮನ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇಒ ಶಶಿಧರ್, ಪಿಡಿಒ ರಾಮಚಂದ್ರಪ್ಪ, ಮುಖ್ಯ ಶಿಕ್ಷಕಿ ಸಾವಿತ್ರಮ್ಮ, ಶಿಕ್ಷಕರಾದ ನಿರ್ಮಲಾ, ಗಂಗಮ್ಮ, ನೀಲಾಂಬರಿ ಇತರರು ಇದ್ದರು.