ಭರಮಸಾಗರ ಹೋಬಳಿಯಲ್ಲಿ ಸುರಿದ ಮಳೆಯಿಂದ ಕೃಷಿ ಕಾರ್ಯ ಆರಂಭಿಸಿರುವ ರೈತರು. Rain 
ಚಿತ್ರದುರ್ಗ

ಮಳೆ ಬೆನ್ನಲ್ಲೇ ಕೃಷಿಯತ್ತ ರೈತರ ಚಿತ್ತ Rain

ಪ್ರಮುಖ ಮುಖ್ಯಾಂಶಗಳು

  • ಭರಮಸಾಗರ ಹೋಬಳಿಯಲ್ಲಿ ತಂಪೆರೆದ ವರುಣ
  • ಕೃಷಿಕರಿಗೆ ಕೊಂಚ ಸಮಾಧಾನ
ಸಿ.ಎಂ. ನಾಡಿಗೇರ್, ಭರಮಸಾಗರ
ಮುಂಗಾರು ಕೈಕೊಟ್ಟ ಪರಿಣಾಮ ಕಂಗಾಲಾಗಿದ್ದ ಹೋಬಳಿಯ ರೈತರಿಗೆ ಭಾನುವಾರ ಬೆಳಗ್ಗೆ ಸುರಿದ ಮಳೆ ಕೊಂಚ ಸಮಾಧಾನ ತಂದಿದೆ. Rain
ಬೆಳಗ್ಗೆ ಸುಮಾರು ಒಂದು ಗಂಟೆಕಾಲ ಹದ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ. ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಹನಿಗಳು ಸುರಿಯುತ್ತಿವೆ.
ಕಳೆದೊಂದು ವಾರದಿಂದ ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಸುರಿಯುತ್ತಿದ್ದರೂ ಕೃಷಿಗೆ ಅನುಕೂಲಕರವಾಗಿರಲಿಲ್ಲ. ಭಾನುವಾರ ಸುರಿದ ಮಳೆ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಮಳೆ ಮುಂದುವರಿದಲ್ಲಿ ಮಾತ್ರ ಮುಂಗಾರು ಬೆಳೆಗಳು ಕೈ ಸೇರುತ್ತವೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.
ಪ್ರಾರ್ಥನೆ ಫಲವೇ?: ಭರಮಸಾಗರ, ಬ್ಯಾಲಹಾಳು ಸೇರಿ ಹಲವು ಗ್ರಾಮಗಳಲ್ಲಿ ಮಳೆಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ, ದಾಸೋಹ, ಭಜನೆ, ಗಂಗಾಪೂಜೆ ಹಾಗೂ ಜಾನಪದ ಆಚರಣೆಗಳು ನಿರಂತರ ನಡೆದಿದ್ದವು. ಬ್ಯಾಲಹಾಳು ಗ್ರಾಮದಲ್ಲಿ ಮಳೆ ಮಲ್ಲಪ್ಪ ಪೂಜೆ, ಗಂಗಾ ಕಲಶ ಮೆರವಣಿಗೆ ಹಾಗೂ ಹಳ್ಳದ ಬಳಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. ಭಾನುವಾರ ಸುರಿದ ಮಳೆಯಿಂದಾಗಿ ಈಗಲಾದರೂ ವರುಣ ಕಣ್ಣು ತೆರೆದ ಎಂದು ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.
ತೋಟಗಳಿಗೆ ತಾತ್ಕಾಲಿಕ ನೆಮ್ಮದಿ: ಮಳೆಯಿಂದ ಅಡಿಕೆ, ತೆಂಗಿನ ತೋಟಗಳಿಗೆ ತೇವಾಂಶ ದೊರೆತಿದೆ. ಆದರೂ ಸಮರ್ಪಕ ಮಳೆಯಾಗದಿದ್ದರೆ ಮತ್ತೆ ಕೊಳವೆಬಾವಿ ನೀರನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.
ಕೂಲಿ ಕಾರ್ಮಿಕರಿಗೂ ಕೆಲಸದ ಕೊರತೆ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯುಂಟಾದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂದಾಗಿದೆ. ದಿನಗೂಲಿ ಕಾರ್ಮಿಕರು ಅಲ್ಪ ಮೊತ್ತದ ಕೂಲಿ ಹಣಕ್ಕೆ ಮೆಣಸಿನಕಾಯಿ ಹಾಗೂ ತರಕಾರಿ ಹೊಲಗಳಲ್ಲಿ ದುಡಿಯಲು ಹೋಗುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಆರಂಭವಾದರೆ ಮಾತ್ರ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಬದುಕು ಸಹಜ ಸ್ಥಿತಿಗೆ ಮರಳಲಿದೆ.
ಮೆಕ್ಕೆಜೋಳ ಬೆಳೆದ ರೈತರಿಗೆ ಕ್ವಿಂಟಾಲ್‌ಗೆ ಸುಮಾರು 1300 ರೂ. ಮಾತ್ರ ದೊರೆಯುತ್ತಿತ್ತು. ಆದರೆ, ಈಗ ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ 2900ರೂ.ವರೆಗೆ ದರವಿದೆ. ಬೆಳೆ ಮಾರಾಟದ ವೇಳೆ ನ್ಯಾಯಯುತ ಹಾಗೂ ಸ್ಥಿರ ಬೆಲೆ ದೊರೆತಿದ್ದರೆ ಕೃಷಿ ಲಾಭದಾಯಕವಾಗುತ್ತಿತ್ತು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಪರ್ಯಾಯ ಬೆಳೆಗಳತ್ತ ಒಲವು: ಮೆಕ್ಕೆಜೋಳ ಬಿತ್ತನೆ ಅವಧಿ ಮೀರಿದ ಹಿನ್ನೆಲೆಯಲ್ಲಿ ರೈತರು ಈಗ ಹಸಿ ಮೆಣಸಿನಕಾಯಿ, ಟೊಮ್ಯಾಟೊ, ಸೌತೆಕಾಯಿ, ಕುಂಬಳಕಾಯಿ ಸೇರಿ ಕಡಿಮೆ ಅವಧಿಯಲ್ಲಿ ಫಸಲು ನೀಡುವ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ. ಡಿಸೆಂಬರ್ ವೇಳೆಗೆ ಉತ್ತಮ ಮಳೆಯಾಗುವ ಬೆಲೆ ಸಿಗುವ ನಿರೀಕ್ಷೆಯಲ್ಲಿ ಕೆಲವರು ಹೊಸ ಬೆಳೆಗಳನ್ನು ಬೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಕಟಾವಿಗೆ ಬಂದಿರುವ ಹಸಿ ಮೆಣಸಿನಕಾಯಿ ಹಾಗೂ ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಖರೀದಿಗೆ ಮುಂದಾಗಬೇಕು ಎಂಬುದು ರೈತರ ಒತ್ತಾಸೆಯಾಗಿದೆ.