ಚಿತ್ರದುರ್ಗ ತಾಲೂಕಿನ ಕಸವನಹಳ್ಳಿ ರೈತ ಧನಂಜಯ ಅವರ ಜಮೀನು ಬಿತ್ತನೆಗೆ ಹದ ಮಾಡಿಕೊಂಡಿರುವುದು. 
ಚಿತ್ರದುರ್ಗ

ವರುಣನ ಕೃಪೆಗಾಗಿ ರೈತರ ಚಿತ್ತ ಆಕಾಶದತ್ತ

ಪ್ರಮುಖ ಮುಖ್ಯಾಂಶಗಳು

  • ಮುಂಗಾರಿನ ಗುರಿ 3.18 ಲಕ್ಷ ಹೆಕ್ಟೇರ್ ಭೂಮಿ ಸಿದ್ಧತಾ ಕಾರ್ಯದಲ್ಲೂ ತೊಡಗದ ಅನ್ನದಾತರು
  • ಮಳೆ ಬಳಿಕವೇ ಮಾಗಿ ಉಳುಮೆ
ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ
ಜಿಲ್ಲೆಯಲ್ಲಿ ಈವರೆಗೂ ಎಲ್ಲೂ ಹೇಳಿಕೊಳ್ಳುವಂತಹ ಮುಂಗಾರು ಪೂರ್ವ ಮಳೆಯಾಗಿಲ್ಲ. ಕಳೆದೊಂದು ವಾರದಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ತೋಟದ ಬೆಳೆಗಳು ಒಣಗುತ್ತಿವೆ. ರೈತರು ವರುಣನ ಕೃಪೆಗಾಗಿ ಆಕಾಶದತ್ತ ದೃಷ್ಟಿ ನೆಟ್ಟಿದ್ದಾರೆ.
ಈ ವೇಳೆಗೆ ಪೂರ್ವ ಮುಂಗಾರು ಮಳೆಯಾಗಿದ್ದರೆ ಮೇ 15ರೊಳಗೆ ಶೇ. 25ರಷ್ಟು ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದರು. ಮಳೆಯಾಗದ ಕಾರಣ ಶೇ. 1ರಷ್ಟು ಉಳುಮೆ ಕಾರ್ಯ ನಡೆದಿಲ್ಲ.
ಬೆಳೆ ಉಳಿಸಿಕೊಳ್ಳಲು 800 ರಿಂದ 1 ಸಾವಿರ ಅಡಿವರೆಗೂ ಕೊಳವೆಬಾವಿಗಳನ್ನು ಕೊರೆಸಿದರೂ ಸಫಲವಾಗದೆ ಹಲವರು ಕಂಗಾಲಾಗಿದ್ದಾರೆ.
ಬಯಲುಸೀಮೆ ಚಿತ್ರದುರ್ಗದಲ್ಲಿ ಶೇ. 80 ರಷ್ಟು ಕೃಷಿ ಚಟುವಟಿಕೆ ಮಳೆಯನ್ನೇ ಅವಲಂಬಿಸಿದೆ. ಕಳೆದೆರಡು ದಿನಗಳಿಂದ ಮಧ್ಯಾಹ್ನ, ಸಂಜೆ ಬಳಿಕ ಮೋಡಕವಿದರೂ ವರುಣನ ಆಗಮನ ಇಲ್ಲದಂತಾಗಿದೆ.
ಹದಿನೈದು ದಿನಗಳ ಹಿಂದೆ ಮಳೆಯಾದ ಕೆಲವೆಡೆ ಮಾತ್ರ ಕೆಲವೇ ರೈತರು ಮಾಗಿ ಉಳುಮೆಯಲ್ಲಿ ತೊಡಗಿದ್ದಾರೆ. ಉಳಿದೆಡೆ ಭೂಮಿ ಹಸಿಯಾಗಿಲ್ಲ. ಮುಂಗಾರು ಮಳೆ ಚುರುಕು ಪಡೆದ ನಂತರವೇ ಕೃಷಿ ಚಟುವಟಿಕೆ ಚುರುಕಾಗುವ ಸಾಧ್ಯತೆಗಳಿವೆ.
ನೀರಾವರಿ ಆಶ್ರಿತ ಪ್ರದೇಶದಲ್ಲಿ ಮಾತ್ರ ಮೇ 12ರವರೆಗೆ 4 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ. ಈವರೆಗೂ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಮುಂಗಾರು ಹಂಗಾಮಿನಲ್ಲಿ 3.18 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದೆ. ಕೃಷಿ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಗಾರಿನ 3.18 ಲಕ್ಷ ಹೆಕ್ಟೇರ್ ಬಿತ್ತನೆ ಪೈಕಿ ರಾಗಿ 50 ಸಾವಿರ, ಸಿರಿಧಾನ್ಯ 25 ಸಾವಿರ, ಈ ಭಾಗದ ಪ್ರಮುಖ ಬೆಳೆಯಾದ ಮೆಕ್ಕೆಜೋಳ 90 ಸಾವಿರದಿಂದ 1ಲಕ್ಷ ಹೆಕ್ಟೇರ್. ಅಲ್ಲದೆ, ಎಣ್ಣೆಕಾಳುಗಳಲ್ಲಿ ಜಿಲ್ಲೆಯಲ್ಲೇ ಅಗ್ರಮಾನ್ಯ ಬೆಳೆಯಾದ ಶೇಂಗಾವನ್ನು 1 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ತೊಗರಿಬೇಳೆ 19,450 ಹೆಕ್ಟೇರ್, ಹೆಸರು 3,500, ಸೂರ್ಯಕಾಂತಿ 10,340, ವಾಣಿಜ್ಯ ಬೆಳೆಗಳಲ್ಲಿ ಹತ್ತಿ 9ರಿಂದ 12 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದೆ.
ಸಿರಿಧಾನ್ಯ ಪ್ರದೇಶ ವಿಸ್ತರಣೆ: 2025ರಲ್ಲಿ ಹೊಸದುರ್ಗ ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ, 28 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿತು. ಹೀಗಾಗಿ ಸಿರಿಧಾನ್ಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
20 ಸಾವಿರ ಮೆ.ಟನ್ ರಸಗೊಬ್ಬರ ದಾಸ್ತಾನು: ಮುಂಗಾರಿನಲ್ಲಿ ಜಿಲ್ಲೆಗೆ 64 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಈಗಾಗಲೇ 20 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್ ತಿಳಿಸಿದ್ದಾರೆ.
ದ್ರವ ರೂಪದ ನ್ಯಾನೋ ಯೂರಿಯಾ, ಜೈವಿಕ ಹಾಗೂ ಸಾವಯವ ರಸಗೊಬ್ಬರ ಬಳಕೆಗೆ ರೈತರು ಆದ್ಯತೆ ನೀಡಬೇಕು. ಇದರಿಂದ ಇಳುವರಿಯೂ ಹೆಚ್ಚಲಿದೆ ಎಂದು ಸಲಹೆ ನೀಡಿದ್ದಾರೆ.