ದಿಂಡಾವರ ಗ್ರಾಮದ ಪಶು ಆಸ್ಪತ್ರೆ ಆವರಣದಲ್ಲಿ ಗೋಶಾಲೆ ಆರಂಭಕ್ಕೆ ಆಗ್ರಹಿಸಿ ರೈತರು ಜಾನುವಾರುಗಳನ್ನು ಕಟ್ಟಿಹಾಕಿ ಪ್ರತಿಭಟಿಸಿದರು. ಮುಖಂಡರಾದ ಚಂದ್ರಗಿರಿ, ವಿರೂಪಾಕ್ಷ, ಸಣ್ಣ ತಿಮ್ಮಣ್ಣ, ರಂಗಸ್ವಾಮಿ, ನಾರಾಯಣಸ್ವಾಮಿ ಮತ್ತಿತರರಿದ್ದರು. Demand Opening of Goshala
ಚಿತ್ರದುರ್ಗ

ಗೋಶಾಲೆ, ಮೇವು ಬ್ಯಾಂಕ್ ಆರಂಭಕ್ಕೆ ರೈತರ ಆಗ್ರಹ: ದಿಂಡಾವರ ಪಶು ಆಸ್ಪತ್ರೆಯಲ್ಲಿ ಜಾನುವಾರು ಕಟ್ಟಿ ಆಕ್ರೋಶ Farmers Demand Opening of Goshala

ರೈತ ವಿರೋಧಿ ಧೋರಣೆಯ ವಿರುದ್ಧ ತೀವ್ರ ಆಕ್ರೋಶ

ಹಿರಿಯೂರು: ತಾಲೂಕಿನಲ್ಲಿ ತೀವ್ರ ಬರ ಆವರಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಕ್ಷಣವೇ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯುವಂತೆ ಆಗ್ರಹಿಸಿ, ದಿಂಡಾವರ ಗ್ರಾಮದ ರೈತರು ಶುಕ್ರವಾರ ಸ್ಥಳೀಯ ಪಶು ಆಸ್ಪತ್ರೆ ಆವರಣದಲ್ಲಿ ಜಾನುವಾರುಗಳನ್ನು ಕಟ್ಟಿಹಾಕಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಸರ್ಕಾರದ ರೈತ ವಿರೋಧಿ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. Demand Opening of Goshala

ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ತಾಲೂಕಿನಾದ್ಯಂತ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಜಾನುವಾರುಗಳಿಗೆ ಸಮರ್ಪಕ ನೀರು ಮತ್ತು ಮೇವು ಒದಗಿಸಲಾಗದೆ ಕಂಗಾಲಾಗಿರುವ ಅನೇಕ ರೈತರು, ತಾವು ಪ್ರೀತಿಯಿಂದ ಸಾಕಿದ ರಾಸುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಜಾನುವಾರುಗಳು ಕಸಾಯಿಖಾನೆ ಸೇರುವುದನ್ನು ತಪ್ಪಿಸಲು ಜಿಲ್ಲಾಡಳಿತವು ಪ್ರತಿ ಗ್ರಾಪಂ ಮಟ್ಟದಲ್ಲಿ ಗೋಶಾಲೆ ಮತ್ತು ಮೇವು ಬ್ಯಾಂಕ್ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದರು.

ಎಕರೆಗೆ 50 ಸಾವಿರ ರೂ.ಗೆ ಪಟ್ಟು

ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದರೂ, ಇದುವರೆಗೂ ಸಂಕಷ್ಟದಲ್ಲಿರುವ ಅನ್ನದಾತರಿಗೆ ಸೂಕ್ತ ಪರಿಹಾರ ಒದಗಿಸಿಲ್ಲ. ಕೇವಲ 2,500 ರೂ. ಅಲ್ಪ ಮೊತ್ತದ ಬರ ಪರಿಹಾರ ಘೋಷಿಸಿರುವುದು ನಾಚಿಕೆಗೇಡು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರ ಪ್ರತಿ ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡಬೇಕು. ಕೃಷಿಗೆ ಅಗತ್ಯ ನೀರು, ವಿದ್ಯುತ್ ಹಾಗೂ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ ರೈತರೇ ಸರ್ಕಾರಕ್ಕೆ ನೆರವು ನೀಡುತ್ತಾರೆ. ಅದನ್ನು ಬಿಟ್ಟು ರೈತರ ಪರವಾಗಿದ್ದೇವೆ ಎಂದು ಸರ್ಕಾರ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು. ಕಲ್ವಳ್ಳಿ ಭಾಗದ 17 ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಸೇರಿದಂತೆ ಬಾಕಿ ಇರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಕಚೇರಿಗೆ ಮುತ್ತಿಗೆ ಎಚ್ಚರಿಕೆ

ಕಲ್ವಳ್ಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಗಿರಿ ಮಾತನಾಡಿ, "ಜಾನುವಾರುಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರಾಸುಗಳ ಸಂತತಿ ಕ್ಷೀಣಿಸಿದರೆ ಭವಿಷ್ಯದಲ್ಲಿ ಕೃಷಿ ಕ್ಷೇತ್ರ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. ಗ್ರಾಮೀಣ ಪ್ರದೇಶದ ರೈತರ ಜಾನುವಾರುಗಳಿಗೆ ಸರ್ಕಾರ ಸಮರೋಪಾದಿಯಲ್ಲಿ ಮೇವು ಪೂರೈಸಬೇಕು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಆವರಣದಲ್ಲೇ ಜಾನುವಾರುಗಳನ್ನು ಕಟ್ಟಿಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು," ಎಂದರು.

ಪ್ರತಿಭಟನೆಯಲ್ಲಿ ರೈತರಾದ ವಿರೂಪಾಕ್ಷ, ಸಣ್ಣ ತಿಮ್ಮಣ್ಣ, ರಂಗಸ್ವಾಮಿ, ನಾರಾಯಣಸ್ವಾಮಿ, ನಿಂಗಪ್ಪ, ಗಿರೀಶ್, ರಾಜು, ಸುಬ್ಬಣ್ಣ, ತಿಮ್ಮಣ್ಣ, ಭೂತಣ್ಣ, ರವಿಕುಮಾರ್, ಕರಡಪ್ಪ, ಜಯಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

"ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಇರುವಾಗ ಎಲ್ಲೋ ದೂರದ ಗಾಯತ್ರಿ ಜಲಾಶಯದ ಹಿಂಭಾಗದಲ್ಲಿ ಗೋಶಾಲೆ ಆರಂಭಿಸುವುದು ಅವೈಜ್ಞಾನಿಕ ಕ್ರಮ. ಯಾವುದೇ ಮೂಲಸೌಕರ್ಯವಿಲ್ಲದ ಕಡೆಗೆ ರೈತರು ಜಾನುವಾರುಗಳನ್ನು ಕರೆದೊಯ್ಯುವುದು ಅಸಾಧ್ಯ. ರೈತರಿಗೆ ಅನುಕೂಲವಾಗುವಂತೆ ಗ್ರಾಪಂ ಮಟ್ಟದಲ್ಲೇ ಗೋಶಾಲೆ ಹಾಗೂ ಮೇವು ಬ್ಯಾಂಕ್ ತೆರೆಯಬೇಕು."
ಚಂದ್ರಗಿರಿ, ಅಧ್ಯಕ್ಷರು, ಕಲ್ವಳ್ಳಿ ನೀರಾವರಿ ಹೋರಾಟ ಸಮಿತಿ