ಹೊಸದುರ್ಗದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ 46ನೇ ರೈತ ಹುತಾತ್ಮ ದಿನ ಆಚರಿಸಲಾಯಿತು. ಮಾಯಪ್ಪ, ಕರಿಸಿದ್ದಯ್ಯ, ನಿರಂಜನಮೂರ್ತಿ, ಕೀರ್ತಪ್ಪ ಇತರರು ಇದ್ದರು. Farmer 
ಚಿತ್ರದುರ್ಗ

ಹೊಸದುರ್ಗ ಬರಪೀಡಿತ ಪ್ರದೇಶವಾಗಿ ಘೋಷಿಸಲು ಸರ್ಕಾರಕ್ಕೆ ರೈತ ಸಂಘ ಮನವಿ

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ತಾಲೂಕು ಅಧ್ಯಕ್ಷ ಮಾಯಪ್ಪ ಹೇಳಿಕೆ
  • 46ನೇ ರೈತ ಹುತಾತ್ಮ ದಿನಾಚರಣೆ
ಹೊಸದುರ್ಗ: ತಾಲೂಕಿನಲ್ಲಿ ಮಳೆ ಅಭಾವದಿಂದ ಬೆಳೆ ಸಂಪೂರ್ಣ ನಾಶವಾಗಿದ್ದು, ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವಾಗಿ  ಘೋಷಣೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮಾಯಪ್ಪ ಹೇಳಿದರು. Farmer
ಪಟ್ಟಣದಲ್ಲಿ ಮಂಗಳವಾರ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ 46ನೇ ರೈತ ಹುತಾತ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಮುಂಗಾರು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಮಳೆಯಂತೂ ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟಿದೆ. ಜನ, ಜಾನುವಾರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ರೈತರ ನೆರವಿಗೆ ಬರಬೇಕು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಕ್ರಮವಾಗಿ ಎಕರೆಗೆ 20 ಸಾವಿರ ರೂ. ಹಾಗೂ 40 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಬೇಕು ಎಂದರು.
ಸರ್ಕಾರ 1980ರ ಜುಲೈ 21ರಂದು ಗೋಲಿಬಾರ್ ಮಾಡುವ ಮೂಲಕ ರೈತರ ಸಾವಿಗೆ ಕಾರಣವಾಗಿತ್ತು. ರೈತಪರ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ರೈತರನ್ನು ಸ್ಮರಿಸಲು ಪ್ರತಿ ವರ್ಷ ಜುಲೈ 21ರಂದು ರೈತ ಹುತಾತ್ಮ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಹುತಾತ್ಮ ರೈತರ ತ್ಯಾಗ, ಬಲಿದಾನ ರೈತ ಹೋರಾಟಕ್ಕೆ ಆದರ್ಶವಾಗಬೇಕು. ಆಳುವ ಸರ್ಕಾರಗಳಿಂದ ರೈತರು ಕನಿಷ್ಠ ಸೌಲಭ್ಯ ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಹೋರಾಟಗಳ ಮೂಲಕ ರೈತರ ಬದುಕನ್ನು ಉತ್ತಮಗೊಳಿಸುವುದು ಸಂಘದ ಧ್ಯೇಯವಾಗಿದೆ ಎಂದರು. ರೈತ ಮುಖಂಡ ಕರಿಸಿದ್ದಯ್ಯ ಮಾತನಾಡಿ, ರೈತರ ಬಲಿದಾನ ನೆನೆಯುವುದು ನಮ್ಮ ಕರ್ತವ್ಯವಾಗಿದೆ ಎಂದರು. ಸಂಘದ ಕಾರ್ಯದರ್ಶಿ ನಿರಂಜನಮೂರ್ತಿ, ಮುಖಂಡರಾದ ಕೀರ್ತಪ್ಪ, ರಘು, ರಾಮಣ್ಣ, ಹರೀಶ ಇತರರು ಇದ್ದರು.