ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಗುರುವಾರ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಲು ತಾಲೂಕಿನ ವಿವಿಧ ಗ್ರಾಮಗಳ ರೈತರು ಸರತಿ ಸಾಲಿನಲ್ಲಿ ನಿಂತಿರುವುದು.
- ಚಿಕ್ಕಜಾಜೂರಿನ ಎಪಿಎಂಸಿ ಉಪ ಮಾರುಕಟ್ಟೆ
- ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೋಂದಣಿ
- ಹೊಳಲ್ಕೆರೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಭಾಗಿ
ಚಿಕ್ಕಜಾಜೂರು: ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 2025-26ನೇ ಸಾಲಿನ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ರೈತರ ನೋಂದಣಿ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಹೊಳಲ್ಕೆರೆ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಕಳೆದ ನಾಲ್ಕು ದಿನಗಳಿಂದ ಸರತಿ ಸಾಲಿನಲ್ಲಿ ನಿಂತು ನೋಂದಣಿಯನ್ನು ಮಾಡಿಸುತ್ತಿರುವುದು ಕಂಡು ಬಂದಿದೆ. ಈವರೆಗೆ ಒಟ್ಟು 400 ರೈತರು ನೋಂದಣಿ ಮಾಡಿಸಿದ್ದಾರೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 4886 ರೂ. ನಿಗದಿ ಮಾಡಿದೆ.
ಎಲ್ಲ ವರ್ಗದ ರೈತರು ಎಕರೆಗೆ 10 ಕ್ವಿಂಟಾಲ್‌ನಂತೆ, ಗರಿಷ್ಠ 50 ಕ್ವಿಂಟಾಲ್‌ವರೆಗೆ ರಾಗಿಯನ್ನು ಮಾರಾಟ ಮಾಡಲು ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಗರಿಷ್ಠ 20 ಕ್ವಿಂಟಾಲ್ ಮಾತ್ರ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ರೈತರು ತಾಲೂಕಿನ ಬಹುತೇಕ ರೈತರು ಮೆಕ್ಕೆಜೋಳಕ್ಕಿಂತ ಹೆಚ್ಚಾಗಿ ರಾಗಿ ಬೆಳೆದಿರುವುದರಿಂದ ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ 30 ಕ್ವಿಂಟಾಲ್‌ನಷ್ಟು ರಾಗಿ ಖರೀದಿಸುವಂತೆ ಸರ್ಕಾರ ಆದೇಶ ನೀಡಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದು ಖರೀದಿ ಕೇಂದ್ರದ ಅಧಿಕಾರಿ ತಿಳಿಸಿದ್ದಾರೆ.
ನೋಂದಣಿ ಕಾರ್ಯ ಡಿಸೆಂಬರ್ 15ಕ್ಕೆ ಮುಕ್ತಾಯಗೊಳ್ಳಲಿದ್ದು, ರೈತರು ಖುದ್ದು ಹಾಜರಾಗಿ, ಎಫ್‌ಐಡಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳೊಂದಿಗೆ ನೋಂದಣಿ ಮಾಡಿಸಬೇಕು.
2026ರ ಜನವರಿ 1 ರಿಂದ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿಯನ್ನು ಆರಂಭಿಸಲಾಗುವುದು. ನೋಂದಣಿ ಮಾಡಿಸಿದ ರೈತರು ರಾಗಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವಂತೆ ಉಪ ಮಾರುಕಟ್ಟೆ ಖರೀದಿ ಕೇಂದ್ರದ ಹಿರಿಯ ಸಹಾಯಕ ಅಧಿಕಾರಿ ಎಂ.ಎಂ.ಮಲ್ಲನ ಗೌಡರ್ ಮಾಹಿತಿ ನೀಡಿದ್ದಾರೆ.