ಹೊಸದುರ್ಗದಲ್ಲಿ ಭಾನುವಾರ ನೊಳಂಬ ಲಿಂಗಾಯತ ಸಂಘ ಹಾಗೂ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಬಿ.ಜಿ. ಗೋವಿಂದಪ್ಪ ಉದ್ಘಾಟಿಸಿದರು. ಎಸ್.ಎನ್. ಸಿದ್ದರಾಮಪ್ಪ, ಡಾ. ಭಾಗ್ಯ, ಯತಿರಾಜ್, ಮರಿದಿಮ್ಮಪ್ಪ, ರವಿಕುಮಾರ್ ಇತರರು ಇದ್ದರು. Education 
ಚಿತ್ರದುರ್ಗ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಸೌಲಭ್ಯ Education

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿಕೆ
  • ಹೊಸದುರ್ಗದಲ್ಲಿ ಪ್ರತಿಭಾ ಪುರಸ್ಕಾರ

ಹೊಸದುರ್ಗ: ತಾಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

Education

ಪಟ್ಟಣದ ಸಿದ್ಧರಾಮೇಶ್ವರ ಸಭಾಭವನದಲ್ಲಿ ಭಾನುವಾರ ನೊಳಂಬ ಲಿಂಗಾಯತ ಸಂಘ ಹಾಗೂ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಹಿರಿಯೂರು ರಸ್ತೆಯಲ್ಲಿ 25 ಎಕರೆ ಪ್ರದೇಶದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಕಾಲೇಜು ಆರಂಭಿಸಲಾಗುತ್ತಿದೆ. ತಾಲೂಕಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸ್ಥಳೀಯವಾಗಿ ಒದಗಿಸುವ ನಿಟ್ಟಿನಲ್ಲಿ 10 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಕೆಎಂಆರ್‌ಸಿಎಲ್ ಅನುದಾನದಡಿ ಶಾಲೆಗಳಿಗೆ ಹೊಸ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅಂಕಗಳಿಕೆ ಶಿಕ್ಷಣದ ಮುಖ್ಯ ಗುರಿಯಾಗಿದೆ. ವಿದ್ಯಾರ್ಥಿಗಳು ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಸಾಧನೆಯ ಮೂಲಕ ಪಾಲಕರಿಗೆ ಕೀರ್ತಿ ತರಬೇಕು. ಉದ್ಯೋಗಸ್ಥರಾಗುವುದಕ್ಕಿಂತ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.
ಎಸಿಪಿ ಯತಿರಾಜ್ ಮಾತನಾಡಿ, ಯುವ ಪೀಳಿಗೆ ಪ್ರಚೋದನೆಗೆ ಒಳಗಾಗಬಾರದು. ತಪ್ಪು ಆಯ್ಕೆಗಳು ಬದುಕನ್ನು ಅತಂತ್ರಗೊಳಿಸಬಹುದು. ಶಿಕ್ಷಣದ ಮೂಲಕ ಬದುಕು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು, ಶ್ರದ್ಧೆ ಹಾಗೂ ಸಂಯಮದಿಂದ ಅಭ್ಯಾಸ ಮಾಡುವಂತೆ ಕಿವಿಮಾತು ಹೇಳಿದರು.
ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತೆ ಡಾ. ಭಾಗ್ಯ ಮಾತನಾಡಿ, ವಿದ್ಯಾಭ್ಯಾಸದ ಆಯ್ಕೆಯಲ್ಲಿ ಎಚ್ಚರವಹಿಸಬೇಕು. ಡಾಕ್ಟರ್, ಇಂಜಿನಿಯರ್ ಹೊರತಾಗಿ ಬೇರೆ ಅವಕಾಶವಿಲ್ಲ ಎಂಬ ಧೋರಣೆ ಬೇಡ. ಇವುಗಳ ಆಚೆಗೆ ಅವಕಾಶಗಳಿವೆ. ಅವುಗಳ ಬಗ್ಗೆ ತಿಳಿದು ಸತತ ಪರಿಶ್ರಮದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಮರಿದಿಮ್ಮಪ್ಪ, ನೊಳಂಬ ಲಿಂಗಾಯಿತ ಸಂಘದ ಕಾರ್ಯದರ್ಶಿ ಕೆ.ಬಿ. ಶಶಿಧರ, ವಕೀಲರ ಸಂಘದ ಅಧ್ಯಕ್ಷ ಎ.ಎಲ್. ಬೊಮ್ಮಣ್ಣ, ಮಾಜಿ ಅಧ್ಯಕ್ಷ ಎಚ್.ಬಿ. ರವಿಕುಮಾರ, ಮಲ್ಲಿಕಾರ್ಜುನಪ್ಪ, ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಶಶಿಧರ್, ಹನುಮಂತಪ್ಪ ಇತರರಿದ್ದರು.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹೆಚ್ಚಿನ ಅರ್ಹತೆ ಇದೆ. ಆತ್ಮವಿಶ್ವಾಸದ ಕೊರತೆಯಿಂದ ಸಾಧನೆಯ ಹಾದಿಯಲ್ಲಿ ಹಿನ್ನಡೆಯಾಗುತ್ತದೆ. ದೃಢ ಸಂಕಲ್ಪ ಹಾಗೂ ಸಾಧಿಸುವ ಛಲವಿದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ನಾನು ಸಹ ಗ್ರಾಮೀಣ ಶಾಲೆಗಳಲ್ಲಿ ಕಲಿತಿದ್ದರೂ ಪರಿಶ್ರಮದ ಫಲವಾಗಿ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗೇರಲು ಸಾಧ್ಯವಾಯಿತು. ಮಕ್ಕಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.

— ಎಸ್.ಎನ್. ಸಿದ್ದರಾಮಪ್ಪ, ನಿವೃತ್ತ ಪೋಲೀಸ್ ಮಹಾ ನಿರ್ದೇಶಕ