ವಿವಿ ಹೆಲ್ತ್ ಸೆಂಟರ್‌ನಲ್ಲಿ ಅವಧಿ ಮೀರಿದ ಔಷಧ ಪತ್ತೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಕೇವಲ ಮೂರು ದಿನಗಳ ಹಿಂದೆಯಷ್ಟೇ ಅಕಾರ ವಹಿಸಿಕೊಂಡಿರುವ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಸಂತೋಷ್ ಬಿ. ಜಗಲಸಾರ ಅವರು ಬುಧವಾರ ಬೆಳ್ಳಂಬೆಳಗ್ಗೆ ವಿವಿ ಆರೋಗ್ಯ ಕೇಂದ್ರಕ್ಕೆ (ಹೆಲ್ತ್ ಸೆಂಟರ್) ಏಕಾಏಕಿ ಭೇಟಿ ನೀಡಿ ಕಡತ ಹಾಗೂ ಔಷಧ ಪರಿಕರಗಳ ಪರಿಶೀಲನೆ ನಡೆಸಿದ್ದಾರೆ. ಈ ದಿಢೀರ್ ತಪಾಸಣೆ ವೇಳೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಆರೋಗ್ಯದೊಂದಿಗೆ ಆಟವಾಡುತ್ತಿದ್ದ ಗಂಭೀರ ಬೇಜವಾಬ್ದಾರಿತನ ಬೆಳಕಿಗೆ ಬಂದಿದ್ದು, ಅವ ಮೀರಿದ ಔಷಧಗಳು ಪತ್ತೆಯಾಗಿವೆ. ಇದರಿಂದ ಕೆರಳಿದ ಕುಲಸಚಿವರು ಅಲ್ಲಿನ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶ್ವವಿದ್ಯಾನಿಲಯದ ನಿಯಮಾವಳಿಗಳ ಪ್ರಕಾರ, ಪ್ರತಿ ವರ್ಷ ಕ್ಯಾಂಪಸ್‌ನಲ್ಲಿರುವ ಹೆಲ್ತ್ ಸೆಂಟರ್‌ಗೆ ವಿವಿಯಿಂದಲೇ ಅಕೃತವಾಗಿ ಟೆಂಡರ್ ಕರೆದು ಗುಣಮಟ್ಟದ ಔಷಧ ಹಾಗೂ ವೈದ್ಯಕೀಯ ಪರಿಕರಗಳನ್ನು ಖರೀದಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ವಿವಿಯಲ್ಲಿ ಅನುದಾನ ಕೊರತೆ ನೆಪದಿಂದ ಮಂಗಳೂರಿನ ಜನೌಷಧ ಕೇಂದ್ರವೊಂದರ ಮೂಲಕ ಹೆಲ್ತ್ ಸೆಂಟರ್‌ಗೆ ಔಷಧ ಪೂರೈಕೆ ಮಾಡಲಾಗಿತ್ತು ಎನ್ನಲಾಗಿದೆ. ಬುಧವಾರ ಬೆಳಗ್ಗೆ ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಹೆಲ್ತ್ ಸೆಂಟರ್‌ಗೆ ಲಗ್ಗೆ ಇಟ್ಟ ಕುಲಸಚಿವರು, ದಾಸ್ತಾನು ಕೊಠಡಿಯಲ್ಲಿದ್ದ ದೂಳು ಹಿಡಿದ ಕಡತಗಳು ಹಾಗೂ ಔಷಧಗಳ ಬ್ಯಾಚ್ ನಂಬರ್ ಪರಿಶೀಲಿಸಿದಾಗ ಅವ ಮುಗಿದಿರುವ ಔಷಧ ಪತ್ತೆಯಾಗಿವೆ.
ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಆರೋಗ್ಯದ ವಿಷಯದಲ್ಲಿ ಇಂತಹ ಬೇಜವಾಬ್ದಾರಿತನವನ್ನು ಸಹಿಸಲು ಸಾಧ್ಯವಿಲ್ಲ. ಅವ ಮೀರಿದ ಔಷಧಗಳನ್ನು ದಾಸ್ತಾನಿನಲ್ಲಿ ಇಟ್ಟುಕೊಂಡಿದ್ದು ಹೇಗೆ? ಇದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಎಂದು ಸಂತೋಷ್ ಬಿ. ಜಗಲಸಾರ ಅವರು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ (ಮಂಗಳಗಂಗೋತ್ರಿ) ಕ್ಯಾಂಪಸ್‌ನಲ್ಲಿರುವ ಈ ಆರೋಗ್ಯ ಕೇಂದ್ರಕ್ಕೆ ಸುದೀರ್ಘ ಇತಿಹಾಸವಿದೆ. 1980ರಲ್ಲಿ ಸ್ಥಾಪನೆಯಾದ ಈ ಕೇಂದ್ರವು ಕ್ಯಾಂಪಸ್‌ನ ಸಾವಿರಾರು ವಿದ್ಯಾರ್ಥಿಗಳು, ಸಂಶೋಧಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ತುರ್ತು ಚಿಕಿತ್ಸೆ ಮತ್ತು ಸಾಮಾನ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ನಡೆಸಲು ಸುಸಜ್ಜಿತ ಪ್ರಯೋಗಾಲಯ (ಲ್ಯಾಬ್) ಕೂಡ ಇದ್ದು, ಇಂತಹ ಪ್ರಮುಖ ಕೇಂದ್ರದಲ್ಲಿ ಇಷ್ಟೊಂದು ದೊಡ್ಡ ನಿರ್ಲಕ್ಷ್ಯ ನಡೆದಿರುವುದು ಈಗ ವಿವಿ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನೂತನ ಕುಲಸಚಿವರ ಈ ದಿಢೀರ್ ಆ್ಯಕ್ಷನ್‌ನಿಂದಾಗಿ ವಿವಿಯ ಇತರ ಇಲಾಖೆಗಳ ಅಕಾರಿಗಳು ಹಾಗೂ ಸಿಬ್ಬಂದಿ ವರ್ಗದಲ್ಲೂ ಈಗ ನಡುಕ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಈ ಔಷಧ ಪೂರೈಕೆ ದಂಧೆಯ ಹಿಂದೆ ಯಾರ ಕೈವಾಡವಿದೆ ಎಂಬುದು ತನಿಖೆಯಿಂದ ಹೊರಬರಬೇಕಿದೆ.
ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಸಂತೋಷ್ ಬಿ. ಜಗಲಸಾರ
ಹೆಲ್ತ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಕೆಲವು ಅವಧಿ ಮೀರಿದ ಔಷಧ ಸಿಕ್ಕಿದೆ, ಔಷಧ ಬದಲಾಯಿಸಲು ಸೂಚನೆ ನೀಡಲಾಗಿದೆ. ಪ್ರತಿಯೊಂದು ಔಷಧಗಳ ಅವಧಿಯನ್ನು ನಿರಂತರ ಪರಿಶೀಲಿಸಲು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಇದು ಪುನರಾವರ್ತನೆ ಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಲ್ಲದೆ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
-ಸಂತೋಷ್ ಬಿ. ಜಗಲಸಾರ, ಕುಲಸಚಿವರು
ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ