ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಭಾನ್ವೇಷಣೆ ಮತ್ತು ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ನಡೆದ ಸೈಬರ್ ಸೇವೆಗಳಲ್ಲಿ ಮಹಿಳಾ ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ಪ್ರಾಧ್ಯಾಪಕರು. 
ಚಿತ್ರದುರ್ಗ

ಸೈಬರ್ ಭದ್ರತಾ ಸೇವಾಕ್ಷೇತ್ರದಲ್ಲಿ ಪರಿಣತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಬಿ. ಸುಬ್ಬಾರೆಡ್ಡಿ ಹೇಳಿಕೆ
  • ತರಬೇತಿ ಕಾರ್ಯಾಗಾರ
ನಾಯಕನಹಟ್ಟಿ: ಕೃತಕ ಬುದ್ದಿಮತ್ತೆ ಯುಗದಲ್ಲಿ ಸೈಬರ್ ಭದ್ರತಾ ಸೇವಾ ಕ್ಷೇತ್ರದ ಬಗ್ಗೆ ಮಹಿಳೆಯರು ಪರಿಣತಿ ಹೊಂದುವುದು ಅಗತ್ಯ ಎಂದು ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ ಮುಖ್ಯಸ್ಥ ಪ್ರೊ.ಬಿ. ಸುಬ್ಬಾರೆಡ್ಡಿ ಹೇಳಿದರು.
ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರತಿಭಾನ್ವೇಷಣೆ ಮತ್ತು ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಸೈಬರ್ ಸೇವೆಗಳಲ್ಲಿ ಮಹಿಳಾ ಪ್ರಾಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆರೋಗ್ಯ, ಶಿಕ್ಷಣ, ಕೃಷಿ, ತಂತ್ರಜ್ಞಾನ, ಬ್ಯಾಂಕಿಂಗ್, ಕ್ರೀಡೆ, ರಕ್ಷಣಾ ಕ್ಷೇತ್ರ ಸೇರಿ ಎಲ್ಲ ಸಾರ್ವಜನಿಕ ವಲಯಗಳಲ್ಲಿ ಕಂಪ್ಯೂಟರ್, ಮೊಬೈಲ್, ಪಿಸಿಗಳ ಬಳಕೆ ಮಾಡಲಾಗುತ್ತಿದೆ. ಕೆಲ ಕಿಡಿಗೇಡಿಗಳು ಕಂಪ್ಯೂಟರ್, ಮೊಬೈಲ್‌ಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು (ಡಾಟಾ) ಹ್ಯಾಕಿಂಗ್ ಮಾಡಿ ಮಾಹಿತಿ ಕದಿಯುವುದು ಅಥವಾ ನಾಶಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ವ್ಯಕ್ತಿ ಸೇರಿ ದೇಶದ ಭದ್ರತೆಗೂ ಕಂಟಕ ಎದುರಾಗುತ್ತದೆ. ಇದಕ್ಕೆ ಪರಿಹಾರವೇ ಸೈಬರ್ ಸೇವೆಗಳು ಎಂದರು.
ಕೃತಕ ಬುದ್ದಿಮತ್ತೆ ಯುಗದಲ್ಲಿ ಸೈಬರ್ ಸೇವೆಗಳು ಮಹತ್ವದ ಸ್ಥಾನ ಪಡೆದಿವೆ. ಇಂದು ಈ ಆನ್‌ಲೈನ್ ಮೂಲಕ ವಂಚನೆ ಎಸಗುವ ವ್ಯಕ್ತಿಗಳ ಪ್ರಯತ್ನ ವಿಫಲಗೊಳಿಸುವುದು ಸೈಬರ್ ಸೇವೆಗಳ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಸೈಬರ್ ಅಪರಾಧಗಳು ಮತ್ತು ಸೈಬರ್ ಸೇವೆಗಳ ಬಳಕೆ ಪರಿಣಿತಿ ನೀಡಲು ಐಐಎಸ್ಸಿ ಮತ್ತು ಬ್ರಿಟಿಷ್ ಏಷಿಯನ್ ಟ್ರಸ್ಟ್ ಸಂಸ್ಥೆಗಳು ಜಂಟಿಯಾಗಿ 5ದಿನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿವೆ. ಇದಕ್ಕಾಗಿ ಐಐಎಸ್ಸಿ ಸಂಸ್ಥೆಯಲ್ಲಿ ಕಂಪ್ಯೂಟರ್ ಲ್ಯಾಬ್ ಮೂಲಕ ಸೈಬರ್ ಸೇವೆಗಳು ಮತ್ತು ಸೈಬರ್ ವಂಚನೆಯ ಪ್ರಾಯೋಗಿಕ ತರಗತಿಗಳನ್ನು ಆಯೋಜಿಸಲಾಗಿದೆ. ತರಬೇತಿಗೆ ರಾಜ್ಯದ ಆಯ್ದ 15 ಇಂಜಿನಿಯರಿಂಗ್ ಕಾಲೇಜುಗಳ ಗಣಕ ವಿಜ್ಞಾನದಲ್ಲಿ ಪಾಂಡಿತ್ಯವಿರುವ ಮಹಿಳಾ ಪ್ರಾಧ್ಯಾಪಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ತರಬೇತಿ ಪಡೆದು ವಿದ್ಯಾರ್ಥಿಗಳಿಗೆ ಸೈಬರ್ ಜ್ಞಾನ ಪ್ರಸಾರ ನೀಡಿ ವಂಚನೆಗೊಳಗಾಗದಂತೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸೈಬರ್ ಕ್ಷೇತ್ರದ ಸೇವೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಸೈಬರ್ ಕ್ಷೇತ್ರದ ಪರಿಣಿತರಾದ ರಂಜಿತ್, ಅರ್ಪಿತಾ ಪಾತ್ರೆ, ವೆಂಕಟೇಶ ಶರ್ಮ ಮಾತನಾಡಿದರು.
ಪ್ರೊ. ರಾಘವೇಂದ್ರ, ಪ್ರೊ. ಕಿಶೋರ್, ಇಂಜಿನಿಯರ್ ಹೇಮಂತ್‌ಕುಮಾರ್, ಅಮಿತ್ ಇದ್ದರು.