ನಾಯಕನಹಟ್ಟಿ ಸಮೀಪದ ಐಐಎಸ್ಸಿಯಲ್ಲಿ ಭಾನುವಾರ ಏರ್ಪಡಿಸಿದ್ದ ಅಂತಾರಾಜ್ಯ ಸಾಹಿತ್ಯ ಬೆಳವಣಿಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ಕಾರ್ಯಾಗಾರದಲ್ಲಿ ದ್ವಿಭಾಷಾ ಕವಿ ಪೊಟ್ಲೋರಿ ಹರಿಕೃಷ್ಣ, ಡಾ.ಬಿ. ಸುಬ್ಬಾರೆಡ್ಡಿ, ಬಿ. ವಾಮದೇವಪ್ಪ, ಅಂಜನ್‌ಕುಮಾರ್, ಆರ್. ಶಿವಪ್ರಕಾಶ್ ಇತರರು ಇದ್ದರು. 
ಚಿತ್ರದುರ್ಗ

ಕವನ ರಚನೆಗೆ ವಿಷಯ ಆಯ್ಕೆಯಲ್ಲಿ ಜಾಗರೂಕತೆ ಇರಲಿ

ನಾಗೇಂದ್ರಪ್ಪ ಕೆ.ಎನ್.

ಪ್ರಮುಖ ಮುಖ್ಯಾಂಶಗಳು

  • ದ್ವಿ ಭಾಷಾ ಕವಿ ಪೊಟ್ಲೋರಿ ಹರಿಕೃಷ್ಣ ಅಭಿಮತ
  • ಅಂತಾರಾಜ್ಯ ಸಾಹಿತ್ಯ ಕಾರ್ಯಾಗಾರ, ಕಾವ್ಯೋತ್ಸವ
ನಾಯಕನಹಟ್ಟಿ: ಕವಿಗಳು ಅಳಿಯುತ್ತಾರೆ. ಆದರೆ, ಅವರು ರಚಿಸಿದ ಸಾಹಿತ್ಯ ಚಿರಕಾಲ ಉಳಿಯುತ್ತದೆ. ಹೀಗಾಗಿ ಕವನ ರಚನೆಗೆ ವಿಷಯವನ್ನು ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದು ಆಂಧ್ರಪ್ರದೇಶದ ದ್ವಿಭಾಷಾ ಕವಿ, ಪ್ರಕಾಶಕ ಪೊಟ್ಲೋರಿ ಹರಿಕೃಷ್ಣ ಹೇಳಿದರು.
ಸಮೀಪದ ಕುದಾಪುರ ಐಐಎಸ್ಸಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಜ್ಯ ಸಾಹಿತ್ಯ ಕಾರ್ಯಾಗಾರ ಮತ್ತು ಕಾವ್ಯೋತ್ಸವದಲ್ಲಿ ಮಾತನಾಡಿ, ಭಾಷೆಯ ಬಳಕೆಯಿಂದ ಅದು ಬೆಳೆಯುತ್ತದೆ ಎಂದು ತಿಳಿಸಿದರು.
ಪಂಪ ಪ್ರಕಾಶನದ ವತಿಯಿಂದ ಈಗಾಗಲೇ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಕೇವಲ 6 ಸಾವಿರ ರೂ.ಗಳಲ್ಲಿ ಕವನ, ಕಾದಂಬರಿಗಳ ಪುಸ್ತಕ ಪ್ರಕಟಿಸಲಾಗುತ್ತಿದೆ. ಕನ್ನಡದಲ್ಲಿ ಶೀಘ್ರ ನೂರನೇ ಪುಸ್ತಕ ಪ್ರಕಟವಾಗಲಿದೆ. ಯುವ ಬರಹಗಾರರ ಪುಸ್ತಕಗಳ ಪ್ರಕಟಣೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಸಂಶೋಧನಾ ವಿಜ್ಞಾನಿ ಡಾ. ಬಿ. ಸುಬ್ಬಾರೆಡ್ಡಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಕ್ಷೇತ್ರ ತಂತ್ರಜ್ಞಾನ ಬಳಕೆಯಲ್ಲಿ ಹಿಂಜರಿಯಬಾರದು. ಹೊಸ ತಂತ್ರಜ್ಞಾನವನ್ನು ಸಾಹಿತ್ಯ ಕ್ಷೇತ್ರ ಬಳಸಿಕೊಳ್ಳಬೇಕು. ಇದರಿಂದ ಸಾಹಿತ್ಯ ಕೃತಿಗಳ ಪ್ರಸಾರ ಹೆಚ್ಚಾಗುತ್ತದೆ. ಡಿಜಿಟಲ್ ಮಾಧ್ಯಮದ ಮೂಲಕ ವೇಗವಾಗಿ ಜನರನ್ನು ತಲುಪಲು ಸಾಧ್ಯವಿದೆ. ಇಲ್ಲವಾದರೆ ಸಾಹಿತ್ಯ ಕ್ಷೇತ್ರದ ಪ್ರಗತಿ ನಿಧಾನವಾಗುವ ಅಪಾಯವಿದೆ ಎಂದರು.
ಸಾಹಿತ್ಯ ಪ್ರಚಾರ ಸುಲಭ: ಹಿಂದಿನ ಕಾಲದಲ್ಲಿ ಕವನಗಳಿಗೆ ಪತ್ರಿಕೆ ಮತ್ತು ಪುಸ್ತಕಗಳು ಮಾತ್ರ ಅವಕಾಶ ನೀಡುತ್ತಿದ್ದವು. ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಪ್ರಪಂಚದ ಎಲ್ಲೆಡೆ ತಲುಪಲು ಸಾಧ್ಯವಿದೆ. ಬರವಣಿಗೆ ನಂತರ ಪ್ರೂಫ್ ರೀಡಿಂಗ್ ಸೇರಿ ನಾನಾ ಹಂತಗಳಿದ್ದವು. ತಂತ್ರಜ್ಞಾನದ ಬಳಕೆಯಿಂದ ಮಾತನಾಡಿದ್ದನ್ನು ಟೈಪಿಸುವ, ವ್ಯಾಕರಣ ದೋಷ ಪತ್ತೆಹಚ್ಚುವುದು ಸೇರಿ ನಾನಾ ಸೌಲಭ್ಯಗಳಿವೆ.
ಕಂಪ್ಯೂಟರ್, ಮೊಬೈಲ್ ಸೇರಿ ಹಲವು ತಾಂತ್ರಿಕ ಸಾಧನಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಬಳಕೆ ಮಾಡಬಹುದಾಗಿದೆ. ಕೃತಕ ಬುದ್ದಿಮತ್ತೆ (ಎಐ), ಜನರೇಟಿವ್ ಎಐಗಳನ್ನು ಬಳಕೆ ಮಾಡಿ ಸಾಹಿತ್ಯದ ಗುಣಮಟ್ಟ ಹೆಚ್ಚಿಸಲು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃತಿಚೌರ್ಯ ಪತ್ತೆಹಚ್ಚಲು ಸಾಧ್ಯವಿದೆ ಎಂದು ಹೇಳಿದರು.
ಆಂಧ್ರ ಗಡಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಅಂಜನ್‌ಕುಮಾರ್ ಮಾತನಾಡಿ, ಆಂಧ್ರಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರಿದ್ದಾರೆ. ಅವರಿಗೆ ಇದೊಂದು ಉತ್ತಮ ಅವಕಾಶ. ಎರಡು ಭಾಷೆಗಳ ನಡುವೆ ಯಾವುದೇ ಸಮಸ್ಯೆ ಮತ್ತು ಸಂಘರ್ಷಗಳಿಲ್ಲ. ಕನ್ನಡ ಮತ್ತು ತೆಲುಗು ಭಾಷೆಗಳ ನಡುವೆ ಸಾಮರಸ್ಯವಿದೆ ಎಂದರು.
ಕಾವ್ಯೋತ್ಸವದ ಅಧ್ಯಕ್ಷತೆ ವಹಿಸಿದ್ದ ಮೆಟ್ರೋ ಇಂಜಿನಿಯರ್ ಆರ್. ಶಿವಪ್ರಕಾಶ್ ಮಾತನಾಡಿ, ಮನಸ್ಸಿನ ಭಾವನೆಗಳನ್ನು ತಿಳಿಸಲು ಕವನ ಸಾಧನವಾಗಿದೆ. ಕಾವ್ಯರಚನೆಯಲ್ಲಿ ಪ್ರಾಸಕ್ಕಿಂತ ಹೆಚ್ಚಾಗಿ ಭಾವನೆಗಳು ಮುಖ್ಯ. ಪ್ರಾಸಕ್ಕಾಗಿ ತ್ರಾಸಪಡದೆ ಓದಿಸಿಕೊಂಡು ಹೋಗುವ ಕಥಾನಕವುಳ್ಳ ಸಾಹಿತ್ಯ ರಚನೆಯಾಗಬೇಕು ಎಂದು ಹೇಳಿದರು.
ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಆಂಧ್ರಪ್ರದೇಶದ 35 ಕವಿಗಳು ಕಾವ್ಯೋತ್ಸವದಲ್ಲಿ ಕವನಗಳನ್ನು ವಾಚಿಸಿದರು.
ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಚಿಕ್ಕಮಗಳೂರು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಚಿತ್ರದುರ್ಗ ಕಸಾಪ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಜಿಲ್ಲಾ ಪದಾಧಿಕಾರಿಗಳಾದ ವಿ. ಧನಂಜಯ, ಶ್ರೀನಿವಾಸ ಮಳಲಿ, ಡಾ. ಚೌಳೂರು ಲೋಕೇಶ, ಐಐಎಸ್ಸಿ ಉಪನ್ಯಾಸಕ ಡಾ. ಕಿಶೋರ್, ಇಂಜಿನಿಯರ್ ಹೇಮಂತ್ ಮತ್ತು ಮೂರು ಜಿಲ್ಲೆಗಳ ಕಸಾಪ ಪದಾಧಿಕಾರಿಗಳಿದ್ದರು.