ಮೊಳಕಾಲ್ಮೂರಿನ ಪಿಎಂಶ್ರೀ ಆದರ್ಶ ವಿದ್ಯಾಲಯ.
- ಉಜ್ವಲ ಭವಿಷ್ಯ ಕಟ್ಟಿಕೊಡುವ ಜ್ಞಾನದೇಗುಲ
- ಎಸ್ಸೆಸ್ಸೆಲ್ಸಿಯಲ್ಲಿ 6ನೇ ಬಾರಿ ಶತಕ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪೊಡೆದುಕೊಳ್ಳುವ ಮೂಲಕ ಇಲ್ಲಿನ ಆದರ್ಶ ವಿದ್ಯಾಲಯ ಪ್ರತಿಭಾವಂತ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ಜ್ಞಾನದೇಗುಲವಾಗಿ ಹೊರಹೊಮ್ಮಿದೆ.
ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ತಾಲೂಕಿನ ಪ್ರೌಢಶಾಲೆಗಳ ಪೈಕಿ ಮುಂಚೂಣಿಯಲ್ಲಿರುವ ಪಿಎಂಶ್ರೀ ಆದರ್ಶ ವಿದ್ಯಾಲಯ ಎಲ್ಲರಿಗೂ ಅಚ್ಚು ಮೆಚ್ಚು. ಈ ಬಾರಿ ಪರೀಕ್ಷೆ ಬರೆದ ಎಲ್ಲ 75 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.100ರಷ್ಟು ಫಲಿತಾಂಶ ತಂದಿದ್ದಾರೆ. ಅತ್ಯುನ್ನತ 46, ಪ್ರಥಮ 29, ಎಸ್.ಆರ್. ಚೈತನ್ಯ 619 ಅಂಕ ಪಡೆದು ತಾಲೂಕಿಗೆ ಟಾಪರ್ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಕಳೆದ 10 ವರ್ಷದ ಅವಧಿಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 6ನೇ ಬಾರಿ ಶೇ.100ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮನ್ವಯತೆ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮೂಲಕ ಕಠಿಣ ಅಭ್ಯಾಸಕ್ಕೆ ಉತ್ತೇಜನ ಕೊಡುತ್ತಿರುವುದರಿಂದ ಸಾಧನೆಯ ಗುರಿ ಮುಟ್ಟಲು ಸಾಧ್ಯವಾಗಿದೆ.
ಪ್ರವೇಶ ಪರೀಕ್ಷೆ: ಈ ಶಾಲೆಗೆ ಸೇರಬೇಕೆಂದರೆ 6ನೇ ತರಗತಿಗೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅತಿ ಹೆಚ್ಚು ಅಂಕ ಪಡೆದು ಅರ್ಹತೆ ಪಡೆದರೆ ಮಾತ್ರ ಅವಕಾಶ. ಪ್ರವೇಶ ಪರೀಕ್ಷೆ ಮೂಲಕವೇ ಶಾಲೆಯ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಆದರ್ಶ ವಿದ್ಯಾಲಯದಲ್ಲೇ ಮಕ್ಕಳನ್ನು ಓದಿಸಬೇಕೆಂಬ ಮನೋಭಾವ ಪಾಲಕರಲ್ಲಿ ಬರುತ್ತಿರುವುದು ಉತ್ತಮ ಬೆಳವಣಿಗೆ.
ಪ್ರಸ್ತುತ 6 ರಿಂದ 10ನೇ ತರಗತಿವರೆಗೆ 560 ವಿದ್ಯಾರ್ಥಿಗಳ ದಾಖಲಾತಿ ಇದೆ. ಶಿಕ್ಷಕರ ಕೊರತೆ ನಡುವೆಯೂ ಕಲಿಕೆಯಲ್ಲಿ ಹಿನ್ನಡೆಯಾಗದಂತೆ ಅತಿಥಿ ಶಿಕ್ಷಕರ ಮೂಲಕ ಸರಿದೂಗಿಸಿಕೊಂಡು ಉತ್ತಮ ಗುಣಮಟ್ಟದ ಪಾಠ, ಪ್ರವಚನಗಳನ್ನು ನೀಡಲಾಗುತ್ತಿದೆ.
ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಮಕ್ಕಳನ್ನು ಪ್ರೋತ್ಸಾಗಿಸಲಾಗುತ್ತಿದೆ.
ಶಾಲೆಯಲ್ಲಿ ವಿಷಯವಾರು ತರಗತಿ ಕೊಠಡಿಗಳು, ಪ್ರಯೋಗಾಲಯ, ಆಟದ ಮೈದಾನ ಸೇರಿ ಅಗತ್ಯ ಮೂಲ ಸೌಕರ್ಯಗಳಿವೆ. ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಇದೆ. ಸಂಜೆ ಬಿಡುವಿನ ವೇಳೆಯಲ್ಲಿ ಗುಂಪು ಅಧ್ಯಯನ, ಕಿರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಜತೆಗೆ ಕಡಿಮೆ ಅಂಕಗಳನ್ನು ಪಡೆದವರನ್ನು ಉತ್ತೇಜಿಸುವ ಕಾರ್ಯಕ್ಕೆ ಒತ್ತುಕೊಡಲಾಗಿದೆ.