municipal council: ಚಳ್ಳಕೆರೆ ನಗರಸಭೆಯಲ್ಲಿ ಬುಧವಾರ ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.  
ಚಿತ್ರದುರ್ಗ

municipal council: ನಗರಸಭೆಯಲ್ಲಿ ಲಂಚ ಇಲ್ಲದೆ ಸಣ್ಣ ಕೆಲಸವೂ ಆಗದು

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಿಂದ ಅಧಿಕಾರಿಗಳು ತರಾಟೆಗೆ
  • ಬಜೆಟ್ ಪೂರ್ವಭಾವಿ ಸಭೆ ಬಹಿಷ್ಕರಿಸಿದ ನಾಗರಿಕರು
  • ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಸಭೆ
ಚಳ್ಳಕೆರೆ: ನಗರಸಭೆಯಲ್ಲಿ ಯಾವುದೇ ಕಾನೂನು ಪಾಲನೆ ಆಗುತ್ತಿಲ್ಲ. ಅಧಿಕಾರಿಗಳು ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಲಂಚ ಇಲ್ಲದೆ ಸಣ್ಣ ಕೆಲಸವೂ ಆಗುವುದಿಲ್ಲ...
ನಗರದಲ್ಲಿ ಬುಧವಾರ ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ಅಧ್ಯಕ್ಷತೆಯಲ್ಲಿ ಕರೆದಿದ್ದ 2026-_27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ.
ಸ್ಥಳೀಯ ಸಂಸ್ಥೆಗಳ ಅಧಿಕಾರದ ಬಗ್ಗೆ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಅಧ್ಯಕ್ಷರ ಅಧಿಕಾರ ಬಳಿಕ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಜೆಟ್ ಸಭೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರ ಸಮ್ಮುಖದಲ್ಲೇ ನಡೆಸಬೇಕಿತ್ತು. ಆವರ ಅನುಪಸ್ಥಿತಿಯಲ್ಲಿ ಸಭೆ ನಡೆಸಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ನಗರಸಭೆ ಮಾಜಿ ಸದಸ್ಯ ಜಿ.ಟಿ. ಗೋವಿಂದರಾಜು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮುದಾಯ ಸಂಘಟಿತ ಅಧಿಕಾರಿ ಡಿ. ಭೂತಣ್ಣ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪೌರಾಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದರು. ಸಭೆ ನಡೆಸಲು ಜಿಲ್ಲಾಧಿಕಾರಿ ನೀಡಿರುವ ಆದೇಶ ಪ್ರತಿ ತೋರಿಸಿ ಎಂದು ಕೇಳಿದಾಗ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ.
ನಗರಸಭೆ ನಾಮನಿರ್ದೇಶನ ಸದಸ್ಯ ಆರ್. ಪ್ರಸನ್ನ ಕುಮಾರ್ ಮಾತನಾಡಿ, ನಗರಸಭೆಯಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲ ಇಲ್ಲ. ಇಸ್ವತ್ತು ಪಡೆಯಲು ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿ ಇದೆ. ಜನರಿಂದ ತೆರಿಗೆ ಪಡೆಯುವುದು ಬಿಟ್ಟರೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಆಗುತ್ತಿಲ್ಲ. ಕೆಲ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಮಾಡಿಸಿಲ್ಲ. ಸ್ವಚ್ಛತೆ ಇಲ್ಲದೆ ತೊಂದರೆ ಅನುಭವಿಸಿರುವ ನಾಗರಿಕರು ನಗರಸಭೆ ಸಹವಾಸ ಸಾಕಪ್ಪ ಎಂದು ಶಾಪ ಹಾಕುತ್ತಿದ್ದಾರೆ ಎಂದರು.
ಪೌರಾಯುಕ್ತ ಜಗರೆಡ್ಡಿ ಅವರು ಬಂದಾಗಿನಿಂದಲೂ ಇದುವರೆಗೆ ಯಾವುದೇ ವಾರ್ಡ್‌ಗೂ ಭೇಟಿ ನೀಡಿಲ್ಲ. ಇವರಿಂದ ನಗರಸಭೆ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ದೂರಿದರು.
ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಮೂರು ವರ್ಷಗಳಿಂದ ಶೇ.15 ರ ಅನುದಾನ ಬಳಕೆ ಮಾಡಿಲ್ಲ. ಈ ಸಂಬಂಧ ಲೋಕಾಯುಕ್ತರಿಗೂ ದೂರು ನೀಡಲಾಗಿತ್ತು. ನಗರಸಭೆಗೆ ಲೋಕಾಯುಕ್ತರೇ ಪತ್ರ ಬರೆದಿದ್ದರೂ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಕೆಲಸ ಆಗಿಲ್ಲ. ಕಳೆದ ಬಜೆಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಬಳಿಕ ಸಭೆ ನಡೆಸಿ ಎಂದು ಆಗ್ರಹಿಸಿದರು.
ಸಾಮಾಜಿಕ ಸಂಘಟಕ ಮಾರುತಿ ಮಾತನಾಡಿ, ರಾತ್ರಿ ಹತ್ತು ಗಂಟೆವರೆಗೂ ನಗರಸಭೆ ಬಾಗಿಲು ತೆರೆದಿರುತ್ತದೆ. ಯಾವ ಶ್ರೀಮಂತರ ಮತ್ತು ವಾಣಿಜ್ಯೋದ್ಯಮಿಗಳ ಕೆಲಸ ಮಾಡಿಕೊಡಲಾಗುತ್ತದೆ ಎಂಬುವುದು ಬಹಿರಂಗ ಪಡಿಸಬೇಕು. ಬಜೆಟ್ ಸಭೆ ಕುರಿತು ಪ್ರಚಾರ ನಡೆಸಿದ ಬಳಿಕ ಪೂರ್ವಭಾವಿ ಸಭೆ ಕರೆಯಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.
ಸಭಿಕರ ಪ್ರಶ್ನೆಗಳಿಗೆ ಉತ್ತರ ಕೊಡದೆ ಮೌನವಹಿಸಿದ್ದ ಅಧಿಕಾರಿಗಳ ನಡೆಗೆ ಬೇಸರಗೊಂಡ ಸಾರ್ವಜನಿಕರು ಸಭೆ ಧಿಕ್ಕರಿಸಿ ಹೊರ ನಡೆದರು.
ಸಭೆಯಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.