ಹಿರಿಯೂರು ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಕೃಷಿಭೂಮಿ ಉಳಿಸಿ ಅಭಿಯಾನಕ್ಕೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿದರು. ಎಂಎಲ್‌ಸಿ ಕೆ.ಎಸ್. ನವೀನ್, ಕೆ.ಟಿ. ಕುಮಾರಸ್ವಾಮಿ, ಮುರಳಿ, ಜಗದೀಶ್, ಯೋಗೇಶ್ ಇದ್ದರು.
- ಸಂಸದ ಗೋವಿಂದ ಕಾರಜೋಳ ಹೇಳಿಕೆ
- ಕೃಷಿಭೂಮಿ ಉಳಿಸಿ ಅಭಿಯಾನ
- ಮಣ್ಣು ರಕ್ಷಿಸದಿದ್ದರೆ ವಿನಾಶ ನಿಶ್ಚಿತ
ಹಿರಿಯೂರು: ಭದ್ರೆ ನೀರು ಬಯಲುಸೀಮೆ ಸ್ಪರ್ಶಿಸಿದ ನಂತರ ಕೃಷಿಭೂಮಿಗೆ ಬಂಗಾರದ ಬೆಲೆ ಬಂದಿದೆ. ರೈತರು ಕೃಷಿಭೂಮಿ ಸಂರಕ್ಷಿಸುವ ಜತೆಗೆ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಸಹಯೋಗದಲ್ಲಿ ಆಯೋಜಿಸಿದ್ದ ಕೃಷಿಭೂಮಿ ಉಳಿಸಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ರೈತರು ಯಾವುದೇ ಕಾರಣಕ್ಕೂ ಕೃಷಿಭೂಮಿ ಮಾರಾಟ ಮಾಡಬಾರದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಿದೆ. ಪಿಎಂ ಕಿಸಾನ್, ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಭಾಗ್ಯ, ಕೃಷಿ ಸಿಂಚಾಯಿ, ಧನ ಧಾನ್ಯ ಯೋಜನೆ, ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಿ ರೈತರ ಆದಾಯ ದ್ವಿಗುಣಗೊಳಿಸಲು ಶ್ರಮಿಸುತ್ತಿದೆ ಎಂದರು.
ರೈತ ಪರಾವಲಂಬಿಯಾಗದೆ ನಮ್ಮ ಪೂರ್ವಿಕರಂತೆ ನೈಸರ್ಗಿಕ ಕೃಷಿಯತ್ತ ಸಾಗಿದರೆ ಮಾತ್ರ ಪ್ರಕೃತಿಯೊಂದಿಗೆ ರೈತನ ಬದುಕು ಹಸನಾಗುತ್ತದೆ. ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ಕೃಷಿಭೂಮಿ ಸಂರಕ್ಷಣೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವಿಕೆ ಇಂದಿನ ಅಗತ್ಯವಾಗಿದೆ. ಮಣ್ಣು ರಕ್ಷಿಸದಿದ್ದರೆ ವಿನಾಶ ನಿಶ್ಚಿತ, ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಕೇಂದ್ರ ಸರ್ಕಾರ ರೈತಸ್ನೇಹಿ ಯೋಜನೆ ಅನುಷ್ಠಾನದ ಜತೆಗೆ ಕೃಷಿ ಭೂಮಿ ಸಂರಕ್ಷಣೆ ಅಭಿಯಾನದ ಮೂಲಕ ಕೃಷಿಕ್ಷೇತ್ರದ ಅಭಿವೃದ್ಧಿ, ಭೂಮಿಯನ್ನು ಉಳಿಸಲು ಜಾಗೃತಿ ಮೂಡಿಸುತ್ತಿದೆ. ಉತ್ತಮ ಆರೋಗ್ಯ, ಸುಸ್ಥಿರ ಪರಿಸರ ನಿರ್ಮಾಣಕ್ಕೆ ಮಣ್ಣಿನ ಫಲವತ್ತತೆ ಕಾಪಾಡುವುದು ಅನಿವಾರ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮಣ್ಣ, ಮುಖಂಡರಾದ ಜಗದೀಶ್, ಎ. ಮುರಳಿ ಗೂಳಿಹಟ್ಟಿ, ರಾಜೇಶ್, ಎನ್.ಆರ್.ಲಕ್ಷ್ಮಿಕಾಂತ್, ವಿಶ್ವನಾಥ್, ಎಚ್.ಆರ್. ಯೋಗೇಶ್, ವೆಂಕಟೇಶ್, ಎಂ.ವಿ. ಹರ್ಷ, ಎ. ರಾಘವೇಂದ್ರ, ಕೃಷಿ ವಿಜ್ಞಾನಿಗಳಾದ ಡಾ. ಬಸವರಾಜ್, ಡಾ. ತಿಪ್ಪೇಸ್ವಾಮಿ, ಡಾ. ಕುಮಾರಸ್ವಾಮಿ ಇತರರು ಇದ್ದರು.