plastic cover ಚಳ್ಳಕೆರೆಯಲ್ಲಿ ಶುಕ್ರವಾರ ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ಅವರು ಕಚೇರಿ ಸಿಬ್ಬಂದಿ ಜತೆಗೆ ತರಕಾರಿ, ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಕವರ್ ಬಳಸದಂತೆ ಎಚ್ಚರಿಕೆ ನೀಡಿದರು. 
ಚಿತ್ರದುರ್ಗ

plastic cover: ಪ್ಲಾಸ್ಟಿಕ್ ಕವರ್ ಬಳಕೆ ಮಾಡಬೇಡಿ

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ಸೂಚನೆ
  • ತರಕಾರಿ, ದಿನಸಿ ಅಂಗಡಿಗಳಿಗೆ ಭೇಟಿ
  • ದಂಡ ಹಾಕುವುದಾಗಿ ಎಚ್ಚರಿಕೆ
ಚಳ್ಳಕೆರೆ: ನಗರದ ತರಕಾರಿ ಮತ್ತು ದಿನಸಿ ಸಾಮಾನುಗಳ ಮಾರಾಟ ಅಂಗಡಿಗಳಿಗೆ ಪೌರಾಯುಕ್ತ ಎಚ್.ಜಿ. ಜಗರೆಡ್ಡಿ, ಕಚೇರಿ ಸಿಬ್ಬಂದಿ ಜತೆಗೆ ಶುಕ್ರವಾರ ಭೇಟಿ ನೀಡಿ ಪ್ಲಾಸ್ಟಿಕ್ ಕವರ್ ಬಳಕೆ ಮಾಡದಂತೆ ಸೂಚನೆ ನೀಡಿದರು.
ಮಾರಾಟ ಕಂಡು ಬಂದಲ್ಲಿ ಅಂಗಡಿ ಪರವಾನಗಿ ರದ್ದುಪಡಿಸಿ, ದಂಡ ಹಾಕುವುದಾಗಿ ಎಚ್ಚರಿಸಿದರು.
ನಗರದಲ್ಲಿ ಸುಗಮ ಸಂಚಾರಕ್ಕಾಗಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ತರಕಾರಿ, ಹಣ್ಣು, ಎಲೆ, ಅಡಕೆ ಮಾರಾಟ ಅಂಗಡಿಗಳು, ಬೆಂಗಳೂರು ರಸ್ತೆಯ ಅರಿಶಿಣ, ಕುಂಕುಮ ಮತ್ತು ಕೃಷಿ ಸಲಕರಣೆಗಳ ಮಾರಾಟದ ಗೂಡಂಗಡಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರ ಮಾಡಲಾಗುವುದು. ಇದಕ್ಕೆ ವ್ಯಾಪಾರಸ್ಥರು ಸಹಕರಿಸಬೇಕು ಎಂದರು.
ನಗರದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ_-ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳ ಓಡಾಟ ಇರುವುದರಿಂದ ಅಪಘಾತಗಳ ಪರಿಸ್ಥಿತಿ ಇದೆ. ಈಗಾಗಲೇ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಅನೇಕ ದೂರು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಿದ್ದೇವೆ. ನಗರದ ಸ್ವಚ್ಛತೆ ಮತ್ತು ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಸಂಜೆ ಜಾಗ ಪರಿಶೀಲನೆ ಮಾಡಿದ ಅವರು, ತಗ್ಗು, ಗುಂಡಿ ಜಾಗ ಮತ್ತು ಮಳೆ ನೀರಿನಿಂದ ಉಂಟಾಗುವ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದರು. ಅಪೂರ್ಣವಾಗಿದ್ದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿದೆ. ಇದರ ಸಮೀಪ ಸಾರ್ವಜನಿಕರ ಅನುಕೂಲಕ್ಕೆ ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆಯ ಸಮುದಾಯ ಸಂಘಟಿತ ಅಧಿಕಾರಿ ಡಿ. ಭೂತಪ್ಪ, ಆರೋಗ್ಯ ನಿರೀಕ್ಷಕರಾದ ಎಚ್. ಮಹಲಿಂಗಪ್ಪ, ಗೀತಮ್ಮ ಇದ್ದರು.