ಕೊರ್ಲಕುಂಟೆ ತಿಪ್ಪೇಸ್ವಾಮಿ, ಚಳ್ಳಕೆರೆ
ಬರಗಾಲದಲ್ಲಿ ದನ, ಕರುಗಳನ್ನು ಉಳಿಸಿಕೊಳ್ಳಲು ಗೋ ಶಾಲೆಗಳನ್ನು ಆರಂಭಿಸಬೇಕು ಎನ್ನುವ ರೈತ ಸಂಘಟನೆಗಳ ಹೋರಾಟಕ್ಕೆ ಎಚ್ಚೆತ್ತು, ಕಂದಾಯ ಇಲಾಖೆ ಗೋ ಶಾಲೆಗಳ ತೆರೆಯಲು ಸಿದ್ಧತೆ ನಡೆಸಿದೆ. ಆದರೆ, ಯೋಜನೆ ಸಿದ್ಧತೆಯಲ್ಲೇ ಉಳಿದಿರುವುದು ಗೋ ಪಾಲಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಈ ಕುರಿತು ರೈತರು ಹೋರಾಟ ನಡೆಸಿ, ಗೋಶಾಲೆ ಆರಂಭಿಸದಿದ್ದರೆ ದನಕರುಗಳನ್ನು ಕಚೇರಿಯೊಳಗೆ ತಂದು ಕಟ್ಟುತ್ತೇವೆ ಎಂದು ಎಚ್ಚರಿಸಿದ್ದರು.
ರೈತರ ಹೋರಾಟದ ಸಂದರ್ಭಕ್ಕೆ ಅಧಿಕಾರಿಗಳು ಇನ್ನೇನು ಸರ್ಕಾರಕ್ಕೆಪ್ರಸ್ತಾವನೆ ಕಳುಹಿಸಿದ್ದೇವೆ. ವರದಿ ಬಂದ ಕೂಡಲೇ ಆರಂಭ ಮಾಡುತ್ತೇವೆ ಎಂದಿದ್ದರು. ಆದರೆ, ಯಾವಾಗ ಕೇಳಿದರೂ ಸಿದ್ಧತೆ ನಡೆಸುತ್ತಿದ್ದೇವೆ ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಅಧಿಕಾರಿಗಳು. ಬುಧವಾರ ಅನೇಕ ತಾಲೂಕುಗಳಲ್ಲಿ ಗೋಶಾಲೆ ಆರಂಭಕ್ಕೆ ಚಾಲನೆ ಸಿಕ್ಕಿದೆ. ಆದರೆ, ಚಳ್ಳಕೆರೆ ತಾಲೂಕಲ್ಲಿ ಆರಂಭಕ್ಕೆ ಸಿದ್ಧತೆಯಲ್ಲೇ ಆಡಳಿತ ಸಿಬ್ಬಂದಿ ಮುಳುಗಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. 2026ರ ಮುಂಗಾರು ವಾಡಿಕೆ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಇದರಿಂದ 1 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಶೇಂಗಾ, ತೊಗರಿ, ಮೆಕ್ಕೆಜೋಳ ಸೇರಿ ಇತರೆ ಸಿರಿಧಾನ್ಯ ಬೆಳೆ ಸಿಕ್ಕಿಲ್ಲ. ಆದರೂ, ಸರ್ಕಾರದಿಂದ ರೈತರಿಗೆ ಯಾವುದೇ ಪರಿಹಾರ, ಬೆಳೆ ವಿಮೆ ಮತ್ತು ಬರಗಾಲ ಕಾಮಗಾರಿ ಜಾರಿ ಮಾಡಿಲ್ಲ. ಕೊನೆ ಪಕ್ಷ ಗೋ ಶಾಲೆಗಳನ್ನಾದರೂ ಆರಂಭಿಸುವ ಆಸೆ ಈಡೇರುತ್ತಿಲ್ಲ.
ಮಳೆಯ ಕೊರತೆಯಾಗಿ ಕೃಷಿಯಿಂದ ರೈತರು ವಿಮುಖರಾಗುವ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ದನ, ಕರುಗಳ ಸಾಕಾಣಿಕೆಯೂ ಕಡಿಮೆಯಾಗುತ್ತಿದೆ. ಕಳೆದ ವರ್ಷ ತಾಲೂಕಿನಲ್ಲಿ 67 ಸಾವಿರ ಇದ್ದ ಜಾನುವಾರುಗಳು ಈ ವರ್ಷ 47 ಸಾವಿರಕ್ಕೆ ಇಳಿಕೆಯಾಗಿವೆ. ಮೇವಿನ ಕೊರತೆ, ಕಡಿಮೆ ಲಾಭ ಮತ್ತಿತರ ಕಾರಣಗಳಿಂದ ಹೈನುಗಾರಿಕೆಯಿಂದ ಜನರು ವಿಮುಖರಾಗುತ್ತಿದ್ದಾರೆ.
ಗೋ ಶಾಲೆಗೆ ಬರುವ ಒಂದು ರಾಸುವಿಗೆ ದಿನಕ್ಕೆ 6 ಕೆಜಿ ಮೇವು ನೀಡಲಾಗುತ್ತದೆ. ಈಗಾಗಲೇ, ಮೇವು ಸರಬರಾಜಿಗೆ ಟೆಂಡರ್ ಮಾಡಲಾಗಿದೆ. ರಾಯಚೂರು, ದೇವದುರ್ಗ, ಸಿರಗುಪ್ಲ, ಕನೆಕಲ್ಲು ಭಾಗದಿಂದ ಭತ್ತದ ಹುಲ್ಲು ಮತ್ತು ಮೆಕ್ಕೆಜೋಳದ ಮೇವು ಗೋ ಶಾಲೆಗೆ ಬರಲಿದೆ. ಗೋವುಗಳ ಆರೋಗ್ಯ ದೃಷ್ಟಿಯಿಂದ ಪಶು ವೈದ್ಯ, ಪಶು ಪರೀಕ್ಷಕ, ಜವಾನ ಮತ್ತು ಮೈತ್ರಿ ಕಾರ್ಯಕರ್ತರ ವ್ಯವಸ್ಥೆ ಅಲ್ಲಿರುತ್ತದೆ.
ತಾಲೂಕಿನ ಸುಮಾರು 47 ಸಾವಿರ ಎತ್ತು, ಹಸು, ಹೆಮ್ಮೆಗಳ ರಕ್ಷಣೆಗಾಗಿ ಸಾಣೀಕೆರೆ, ಚೌಳೂರು ಗೇಟ್, ದೊಡ್ಡ ಉಳ್ಳಾರ್ತಿ ಮತ್ತು ಚೌಡಮ್ಮ ಕಾವಲ್ ಬಳಿ 4 ಗೋ ಶಾಲೆಗಳ ಆರಂಭಕ್ಕೆ ಅಗತ್ಯ ಸಿದ್ಧ್ದತೆ ಮಾಡಲಾಗಿದೆ. ರಾಸುಗಳಿಗೆ ನೆರಳಿನ ಶೆಡ್ಗಳು, ಕುಡಿಯುವ ನೀರಿನ ತೊಟ್ಟಿ ಮತ್ತು ನಿರ್ವಹಣೆಗೆ ಪಶು ಇಲಾಖೆ ಸಿಬ್ಬಂದಿ ನಿಯೋಜಿಸುವ ಯೋಜನೆ ಇದೆ.
ದೇವರ ಎತ್ತುಗಳಿಗೆ ಮೇವು ಕೊಡುವ ರೀತಿ 30ಕ್ಕೂ ಹೆಚ್ಚು ಜಾನುವಾರು ಕಟ್ಟಿಕೊಂಡ ರೈತರಿಗೆ ಮನೆಗೆ ಹುಲ್ಲು ಕೊಡಬೇಕು. ಕುರುಡಿಹಳ್ಳಿ ಬಳಿ ಸ್ಥಾಪಿಸಿರುವ ಶಾಶ್ವತ ಪುಣ್ಯಕೋಟಿ ಗೋ ಶಾಲೆಯಂತೆ ಹೋಬಳಿ ಹಂತದಲ್ಲಿ ಸ್ಥಾಪಿಸಬೇಕು.ಕೆ. ಚಿಕ್ಕಣ್ಣ, ಕಾರ್ಯಾಧ್ಯಕ್ಷ, ಅಖಂಡ ಕರ್ನಾಟಕ ರೈತ ಸಂಘ, ಚಳ್ಳಕೆರೆ