farmer ಕೃಷಿಕ ಬಿ.ಜಿ.ಕೆರೆ ಎಸ್. ವೀರಭದ್ರಪ್ಪ ವಿರುದ್ಧ ಅಬಕಾರಿ ಇಲಾಖೆ ದಾಖಲಿಸಿರುವ ಪ್ರಕರಣ ಹಿಂತೆಗೆತಕ್ಕೆ ಆಗ್ರಹಿಸಿ, ರೈತ ಹಿತ ಚಿಂತಕರ ಬಳಗ ಮೊಳಕಾಲ್ಮೂರಿನಲ್ಲಿ ಪ್ರತಿಭಟನೆ ನಡೆಸಿತು.
- ಮೊಳಕಾಲ್ಮೂರು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ
- ಅಬಕಾರಿ ಇಲಾಖೆ ಅಧಿಕಾರಿಗಳ ನಡೆಗೆ ಆಕ್ರೋಶ
- ತೆಂಗಿನ ಮರದ ನೀರಾ ಉತ್ಪಾದನೆ ಅಪರಾಧ ಎಂದು ಬಿಂಬಿಸುವುದು ಎಷ್ಟು ಸರಿ?
ಮೊಳಕಾಲ್ಮೂರು: ತೆಂಗಿನ ಮರದಿಂದ ನೀರಾ ಉತ್ಪಾದನೆ ಮತ್ತು ಮಾರಾಟ ಅಪರಾಧವೆಂದು ಕೃಷಿಕ ಬಿ.ಜಿ.ಕೆರೆ ಎಸ್. ವೀರಭದ್ರಪ್ಪ ವಿರುದ್ಧ ಅಬಕಾರಿ ಇಲಾಖೆ ದಾಖಲಿಸಿರುವ ಪ್ರಕರಣ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಬಯಲುಸೀಮೆ ರೈತ ಹಿತ ಚಿಂತಕರ ಬಳಗ ತಾಲೂಕು ಆಡಳಿತ ಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಿತು. farmer
ನೀರಾ ಮತ್ತು ಕಲ್ಪರಸದ ವ್ಯತ್ಯಾಸ ತಿಳಿಯದೇ 1,250 ರೂ. ಮೌಲ್ಯದ 5 ಲೀ. ನೀರಾ ವಶಕ್ಕೆ ಪಡೆದು ಬಿ.ಜಿ.ಕೆರೆ ಎಸ್. ವೀರಭದ್ರಪ್ಪ ವಿರುದ್ಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿರುವುದು ನೋವಿನ ಸಂಗತಿ. ಅಧಿಕಾರಿಗಳ ಈ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಮದ್ಯದ ಚಟಕ್ಕೆ ಬಲಿಯಾಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಅದು ಸರ್ಕಾರಕ್ಕೆ ಕಾಣುವುದಿಲ್ಲ. ಆದರೆ, ತೆಂಗಿನ ಮರದ ನೀರಾ ಉತ್ಪಾದನೆ ಅಪರಾಧ ಎಂದು ಬಿಂಬಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ರೈತರಿಗೆ ಪ್ರೇರಣೆಯಾದ ವಸುಂಧರಾ ಫಾರ್ಮ್ಸ್
ಬಿ.ಜಿ.ಕೆರೆ ವಸುಂಧರಾ ಫಾರ್ಮ್ಸ್‌ಗೆ ರಾಜ್ಯದ ವಿವಿಧೆಡೆಯಿಂದ ರೈತರು ಭೇಟಿ ನೀಡಿ ಇಲ್ಲಿನ ಬೆಳೆ ಪದ್ಧತಿ ಕಂಡು, ತಾವೂ ಇದೇ ರೀತಿಯಲ್ಲಿ ಕೃಷಿ ಮಾಡುವ ಪ್ರೇರಣೆ ಪಡೆಯುತ್ತಾರೆ. ಈ ತೋಟ ಪಾಠಶಾಲೆಯಂತಾಗಿದ್ದು, ವೀರಭದ್ರಪ್ಪ ರೈತರಿಗೆ ಪ್ರೇರಣೆಯಾಗಿದ್ದಾರೆ ಎಂದರು.
ತೆಂಗಿನ ಮರದಿಂದ ಲಾಭ ಗಳಿಸುವ ವಿಧಾನಗಳನ್ನು ಪರಿಚಯಿಸಿದ್ದಾರೆ. ವಿವಿಧ ಬೆಳೆಗಳು, ವಿದೇಶಿ ತಳಿಗಳು, ಮೇಕೆ, ಕುರಿ ಸಾಕಾಣಿಕೆ ಬಗೆಯನ್ನೂ ಪರಿಚಯಿಸಿದ್ದಾರೆ. ಪ್ರಸ್ತುತ ತೆಂಗಿನ ಮರಗಳು ಹಲವು ರೀತಿಯ ರೋಗ ಬಾಧೆಗೆ ತುತ್ತಾಗಿರುವುದರಿಂದ, ನೀರಾ ಉತ್ಪಾದಿಸಿ ಹಣ ಸಂಪಾದಿಸುವುದನ್ನು ಹೇಳಿ ಕೊಡುತ್ತಿರುವ ಅವರ ವಿರುದ್ಧ ಆರೋಪ ಹೊರಿಸಿರುವುದು ಸರಿಯಲ್ಲ. ಅವರ ಮೇಲೆ ದಾಖಲಿಸಿರುವ ಪ್ರಕರಣ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ. ಪಿ.ಎಂ. ಮಂಜುನಾಥ, ಎನ್.ಪಿ. ಪ್ರಭಾಕರ, ಕೃಷ್ಣರೆಡ್ಡಿ, ವಿ. ಸಿದ್ದಾರ್ಥ, ಹೇಮಂತಕುಮಾರ್, ಟಿ.ಎಂ. ಮಂಜುನಾಥ, ಶ್ರೀರಾಮರೆಡ್ಡಿ, ಬೋರಯ್ಯ, ಶರಣಪ್ಪ, ಪಾಲಯ್ಯ, ವಿನಯ್, ಬಸವರಾಜ, ಹರೀಶ್, ಬಲರಾಮ್, ಜಿ. ಮಂಜುನಾಥ ಇತರರು ಇದ್ದರು.