ಜಮೀನಿನಲ್ಲಿ ಈರುಳ್ಳಿ ತುಂಬಿ ಚೀಲಗಳಲ್ಲಿ ಇಟ್ಟಿರುವ ದೃಶ್ಯ. 
ಚಿತ್ರದುರ್ಗ

ಉಳ್ಳಾಗಡ್ಡಿ ಬೆಳೆ ಕ್ಷೇತ್ರ ಕುಸಿತ

ರಫ್ತು ಪ್ರಮಾಣದಲ್ಲೂ ಗಣನೀಯ ಇಳಿಕೆ, 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕರ್ನಾಟಕ

ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ

ರಾಜ್ಯದಲ್ಲಿ ಪ್ರತಿ ವರ್ಷ ಈರುಳ್ಳಿ ಬೆಳೆಯುವ ಕ್ಷೇತ್ರ ಹಲವು ಕಾರಣಗಳಿಗೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಈ ಬಾರಿ ಭೀಕರ ಬರಗಾಲದಿಂದಾಗಿ 76 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆ ಕುಂಠಿತವಾಗಿದೆ. ಬಿತ್ತಿದ ಬೆಳೆ ಕೂಡ ನಾಶವಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿದ್ದ ಗುಜರಾತ್ ಎರಡನೇ ಸ್ಥಾನಕ್ಕೆ ಬಂದಿದೆ.

2025-26ರ ಮುಂಗಾರು ಸರ್ವೆ ಪೂರ್ಣಗೊಂಡ ಮಾಹಿತಿಯನ್ವಯ ಹಿಂದಿನ ವರ್ಷ 1,57,904 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. 2026-27ರಲ್ಲಿ ಕೇವಲ 81,837 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ 45ರಷ್ಟು (76,066 ಹೆಕ್ಟೇರ್) ಕುಸಿತ ಕಂಡಿದೆ.

ದೇಶದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತಮಿಳುನಾಡು, ಹರಿಯಾಣದಲ್ಲಿ ಈರುಳ್ಳಿಯನ್ನು ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರದಲ್ಲಿ 5 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 50ರಿಂದ 75 ಲಕ್ಷ ಟನ್ಉ ತ್ಪಾದನೆಯಾಗುತ್ತಿದೆ.

ಕರ್ನಾಟಕದಲ್ಲಿ 1.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 18 ಲಕ್ಷ ಟನ್‌ಗೂ ಹೆಚ್ಚು ಉತ್ಪಾದನೆಯಾಗುತ್ತಿದ್ದು, ಈಗ ಈರುಳ್ಳಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಸಾಗಿದೆ. ಕೆಲ ವರ್ಷ ರಾಜ್ಯದಲ್ಲಿ ವರುಣನ ಆರ್ಭಟ, ನೆರೆ ಹಾವಳಿಗೆ ಸಿಲುಕಿ ಶೇ. 50ರಿಂದ 75ರಷ್ಟು ಈರುಳ್ಳಿ ನಾಶವಾಗಿರುವ ನಿದರ್ಶನಗಳೂ ರಾಜ್ಯದಲ್ಲಿವೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬಿತ್ತನೆಯಲ್ಲೂ ಏರಿಳಿತ ಉಂಟಾಗಿದ್ದು, ಪ್ರಮಾಣ ಹಂತ-ಹಂತವಾಗಿ ಕಡಿಮೆಯಾಗುತ್ತಿದೆ. ಮಳೆ ಬಂದರೂ, ಬಾರದಿದ್ದರೂ ಈರುಳ್ಳಿ ಬೆಳೆಗಾರರು ಕಳೆದ ಒಂದು ದಶಕದ ಅವಧಿಯಲ್ಲಿ ನಷ್ಟ ಅನುಭವಿಸಿ ಕಣ್ಣೀರಿನಲ್ಲಿ ಕೈತೊಳೆದಿರುವುದೇ ಹೆಚ್ಚು.

ಮುಖ್ಯಾಂಶಗಳು

  1. ಭಾರತದಲ್ಲಿ 30.2 ದಶಲಕ್ಷಕ್ಕೂ ಹೆಚ್ಚು ಟನ್ ಈರುಳ್ಳಿ ಉತ್ಪಾದನೆ

  2. ಭಾರತ-ಚೀನಾ ನಡುವೆ ಉತ್ಪಾದನೆಯಲ್ಲಿ ಪೈಪೋಟಿ

  3. ಭಾರತ, ಚೀನಾ, ಈಜಿಪ್ಟ್, ಯುಎಸ್‌ಎ, ಟರ್ಕಿ, ಇರಾನ್, ಇಂಡೋನೇಷಿಯಾ ಒಳಗೊಂಡು ವಿವಿಧೆಡೆ ವಾರ್ಷಿಕ 75 ದಶಲಕ್ಷ ಟನ್ ಈರುಳ್ಳಿ ಉತ್ಪಾದನೆ

  4. ಕೇಂದ್ರ ಸರ್ಕಾರ ಬೆಲೆ ಹೆಚ್ಚಳವಾದ ವೇಳೆ ಗ್ರಾಹಕರ ಅನುಕೂಲಕ್ಕಾಗಿ ಚೀನಾ, ನ್ಯೂಜಿಲ್ಯಾಂಡ್, ಈಜಿಪ್ಟ್ ನಿಂದ ಈರುಳ್ಳಿ ಆಮದು ಮಾಡಿಕೊಂಡ ನಿದರ್ಶನಗಳಿವೆ

ಚಿತ್ರದುರ್ಗದ ಈರುಳ್ಳಿ ವಿದೇಶಕ್ಕೆ

ಏಳೆಂಟು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ವಾರ್ಷಿಕ ಸರಾಸರಿ 30-40 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿತ್ತು. ಈ ವೇಳೆ 4.5 ಲಕ್ಷ ಟನ್ ಈರುಳ್ಳಿ ಉತ್ಪಾದಿಸುವ ಗುರಿ ಹೊಂದಲಾಗಿತ್ತು. ಮುಂಗಾರು ಅವಧಿಯಲ್ಲಿ ಗುಣಮಟ್ಟದ ಈರುಳ್ಳಿಯೂ ಮಲೇಷಿಯಾ, ಶ್ರೀಲಂಕಾ, ಬಾಂಗ್ಲಾ ಹೀಗೆ ವಿದೇಶಗಳಿಗೆ ರಫ್ತಾಗುತ್ತಿತ್ತು. ಬರದಿಂದಾಗಿ ಈ ಪ್ರಮಾಣದಲ್ಲಿ ತೀವ್ರ ಕುಸಿತವಾಗಿದೆ. ಮೂರು ವರ್ಷಗಳ ಹಿಂದೆಯೂ ಬರ ಎದುರಾದ ಕಾರಣ 2023ರ ಅಕ್ಟೋಬರ್ ಅಂತ್ಯಕ್ಕೆ 82 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಈರುಳ್ಳಿ ಭೂಮಿಗೆ ನೈವೇದ್ಯವಾಗಿತ್ತು.

ಈರುಳ್ಳಿ ಬೆಳೆಯಿಂದ ವಿಮುಖ

ರಾಜ್ಯದಲ್ಲಿ ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಕೆಲ ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲೇ 40ರಿಂದ 48 ಸಾವಿರ, ಗದಗ 30ರಿಂದ 35 ಸಾವಿರ, ವಿಜಯಪುರ 25ರಿಂದ 30 ಸಾವಿರ ಹೆಕ್ಟೇರ್ ಒಳಗೊಂಡು ವಿವಿಧ ಜಿಲ್ಲೆಗಳು ಸೇರಿ ಮುಂಗಾರು-ಹಿಂಗಾರು ಅವಧಿಯಲ್ಲಿ 2 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ರೈತರು ಉತ್ಸುಕರಾಗುತ್ತಿದ್ದರು. ತೋಟಗಾರಿಕೆ ಇಲಾಖೆ ಗುರಿಗಿಂತಲೂ ಎರಡ್ಮೂರು ಪಟ್ಟು ಹೆಚ್ಚಾಗಿಯೇ ಉತ್ಪಾದನೆಯಲ್ಲಿ ತೊಡಗುತ್ತಿದ್ದರು. ಈ ಬಾರಿ ವಿಜಯಪುರದಲ್ಲಿ 36,794 ಹೆಕ್ಟೇರ್, ಚಿತ್ರದುರ್ಗದಲ್ಲಿ 15,118 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ವಿವಿಧೆಡೆ ಇಳುವರಿಯೂ ರೈತರ ಕೈಸೇರಿದೆ. ಇನ್ನೂ ಹಲವೆಡೆ ನಷ್ಟವೂ ಉಂಟಾಗಿದೆ. ಇಡೀ ರಾಜ್ಯದ ಸರಾಸರಿ ಗಮನಿಸಿದರೆ, 2026ರಲ್ಲಿ ಶೇ. 30ರಿಂದ 40ರಷ್ಟು ರೈತರು ಈರುಳ್ಳಿ ಬೆಳೆಯಿಂದ ವಿಮುಖರಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಹಿಂದೆಲ್ಲ ಈರುಳ್ಳಿ ಬೆಳೆದು ಅನೇಕ ರೈತರು ಕೋಟ್ಯಾಧೀಶರಾಗಿರುವ ನಿದರ್ಶನಗಳಿವೆ. ಆದರೆ, ಕೆಲವೊಮ್ಮೆ ಅಧಿಕ ಮಳೆ, ಇನ್ನೂ ಕೆಲವೊಮ್ಮೆ ಬರದಿಂದಾಗಿ ಸಾಲಕ್ಕೆ ಸಿಲುಕಿ ದುಡಿದ ಹಣವನ್ನೆಲ್ಲ ಕಳೆದುಕೊಂಡಿದ್ದಾರೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ರಾಜ್ಯದ ಅನೇಕ ರೈತರಿಗೆ ಪರಿಹಾರ ಸಿಕ್ಕರೂ ಖರ್ಚಿಗೂ ಸಮವಲ್ಲ.
ಹಂಪಯ್ಯನ ಮಾಳಿಗೆ ಧನಂಜಯ ರೈತ ಮುಖಂಡ