ಚಿತ್ರದುರ್ಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಸಭೆಯಲ್ಲಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಜಿ.ಬಿ. ಶೇಖರ್, ಇ.ವಿ. ಅಜ್ಜಪ್ಪ, ಎಸ್.ವಿ.ನಾಗರಾಜ್, ಸಿದ್ದರಾಮೇಶ್, ವಸಂತ, ಪವನ್,ಅಬ್ಬು ಬಕ್ಕರ್‌ಸಿದ್ದಿಕ್ ಇತರರು ಇದ್ದರು. 
ಚಿತ್ರದುರ್ಗ

ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಇಂಧನ ದರ, ತೆರಿಗೆ ಹೆಚ್ಚಳದಿಂದ ಕಂಗಾಲು
  • ಸರ್ಕಾರಗಳ ನೀತಿಗಳಿಂದ ಆರ್ಥಿಕ ಸಂಕಷ್ಟ
  • ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಆಕ್ರೋಶ
ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಖಾಸಗಿ ಬಸ್‌ಗಳ ಪ್ರಯಾಣ ದರ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹೇಳಿದರು.
ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಖಾಸಗಿ ಬಸ್ ಮಾಲೀಕರ ಸಂಘದ ಸಭೆಯಲ್ಲಿ ಪ್ರಯಾಣದರ ಏರಿಕೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಆಯಿಲ್, ಟೈಯರ್, ವಾಹನಗಳ ಬಿಡಿ ಭಾಗಗಳ ಬೆಲೆ ಗಗನಕ್ಕೆ ಏರಿವೆ. ಬಸ್‌ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ ಹಾಗೂ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿಲ್ಲ. ಆರ್‌ಟಿಒ ಕಚೇರಿಯ ಎಲ್ಲ ರೀತಿಯ ಶುಲ್ಕವನ್ನೂ ಶೇ.೧೦೦ರಷ್ಟು ಹೆಚ್ಚಿಸಲಾಗಿದೆ ಎಂದು ಲಿಂಗಾರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಯಾವುದೇ ರೀತಿಯ ತೆರಿಗೆ, ಶುಲ್ಕ ಕಡಿಮೆ ಮಾಡುವ ನಿಟ್ಟಿನಲ್ಲಿ ಸಹಕರಿಸುತ್ತಿಲ್ಲ. ಈ ಹಿಂದೆ ಸರ್ಕಾರಿ ಬಸ್‌ಗಳ ಪ್ರಯಾಣ ದರ ಹೆಚ್ಚಳವಾದಾಗ ಖಾಸಗಿ ಬಸ್‌ಗಳಲ್ಲಿ ಹಳೆಯ ದರವೇ ಇದೆ.
ಇದರಿಂದ ನಿತ್ಯ ಒಂದು ಬಸ್‌ಗೆ ೨ ಸಾವಿರ ರೂ. ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಆದ್ದರಿಂದ ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ. ಶೀಘ್ರದಲ್ಲೇ ದರ ಏರಿಕೆ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಲಿಂಗಾರೆಡ್ಡಿ ಹೇಳಿದರು.
ಸಿದ್ದರಾಮೇಶ್, ವಸಂತ, ಪವನ್, ಅಬ್ಬುಬಕ್ಕರ್‌ಸಿದ್ದಿಕ್ ಮತ್ತಿತರ ಬಸ್ ಮಾಲೀಕರು ಮಾತನಾಡಿ, ಇಂಧನ ದರ, ತೆರಿಗೆ ಹಾಗೂ ಬಿಡಿಭಾಗಗಳ ಹೆಚ್ಚಳದಿಂದ ಎದುರಾಗಿರುವ ಆರ್ಥಿಕ ಸಂಕಷ್ಟಗಳ ಕುರಿತಂತೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಜಿ.ಬಿ. ಶೇಖರ್, ಉಪಾಧ್ಯಕ್ಷ ಇ.ವಿ. ಅಜ್ಜಪ್ಪ, ಖಜಾಂಚಿ ಎಸ್.ವಿ. ನಾಗರಾಜ್ ಇದ್ದರು.