ಕಾಟಂದೇವರ ಕೋಟೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಲ್ಲೆಗೊಳಗಾದ ದಲಿತ ವ್ಯಕ್ತಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವುದು. Crime 
ಚಿತ್ರದುರ್ಗ

ಕಾಟಂದೇವರ ಕೋಟೆ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿ ದಲಿತರ ಮೇಲೆ ಹಲ್ಲೆ

ಪ್ರಮುಖ ಮುಖ್ಯಾಂಶಗಳು

  • ಪ್ರತ್ಯುತ್ತರ ನೀಡಿದರೆಂಬ ಕಾರಣಕ್ಕೆ ಕೃತ್ಯ
  • 15 ಜನರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿ ಕಾಟಂದೇವರ ಕೋಟೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದಲಿತರ ಮೇಲೆ ಹಲ್ಲೆ ನಡೆದಿದ್ದು, ಈ ಕುರಿತು ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಕಾಯ್ದೆಯಡಿ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Crime

13 ಮಂದಿ ಎಸ್ಟಿ ಸಮುದಾಯದವರು, ಗೊಲ್ಲ ಸಮುದಾಯದ ಇಬ್ಬರ ವಿರುದ್ಧ ದೂರು ನೀಡಲಾಗಿದೆ ಎಂದು ದಸಂಸ ತಾಲೂಕು ಸಂಚಾಲಕ ಟಿ. ವಿಜಯಕುಮಾರ್ ತಿಳಿಸಿದ್ದಾರೆ.
ಆರೋಪಿತರು ಗ್ರಾಮದಲ್ಲಿ ಡಂಗೂರ ಸಾರಿಸಿ ಎಲ್ಲರ ಸಮ್ಮುಖದಲ್ಲಿ ಒಂದು ಸಭೆ ನಡೆಸಿ, ಹಿಂದಿನ ಕಾಲದಿಂದಲೂ ಹಟ್ಟಿ ಜನರು ಊರಿನಲ್ಲಿ ಯಾರಾದರೂ ಸತ್ತರೆ ಗುಂಡಿ ತೋಡುವುದು, ಹಬ್ಬ, ಜಾತ್ರೆಗಳಲ್ಲಿ ಊರಿನ ಸ್ವಚ್ಛತೆ ಕೆಲಸ ಮಾಡುತ್ತಿದ್ದರು. ಈಗ ಕರೆದರೂ ಯಾರು ಬರುತ್ತಿಲ್ಲ. ಗ್ರಾಮದ ಸಂಪ್ರದಾಯಗಳು ಮುಂದುವರಿಯಬೇಕು ಎಂದು ತಾಕೀತು ಮಾಡಿದ್ದರು ಎನ್ನಲಾಗಿದೆ.
ಅದಕ್ಕೆ ಪ್ರತ್ಯುತ್ತರ ನೀಡಿದ ದಲಿತರು, ಊರಿನ ಸಾರ್ವಜನಿಕ ಸ್ಥಳಗಳಲ್ಲಿ ನಮಗೆ ಮುಕ್ತ ಅವಕಾಶವಿಲ್ಲ. ಕೆರೆಯಲ್ಲಿ ಜಾಲಿ ಗಿಡಗಳ ಹರಾಜು ಹಣವನ್ನು ಚೀಟಿ ಮಾಡುತ್ತೀರಿ. ಇದರಲ್ಲಿ ನಮ್ಮ ಸಮುದಾಯಕ್ಕೆ ಚೀಟಿ ಹಣ ಬಡ್ಡಿಗೂ ಕೊಡುತ್ತಿಲ್ಲ. ಗ್ರಾಮದಲ್ಲಿರುವ ಕಲ್ಯಾಣ ಮಂಟಪದಲ್ಲಿ ನಮ್ಮ ಸಮುದಾಯದ ಮದುವೆಗಳಿಗೆ ಅವಕಾಶ ನೀಡುತ್ತಿಲ್ಲ. ಈಗಿನ ಕಾಲದಲ್ಲೂ ನಮಗೆ ತಾರತಮ್ಯ ಮಾಡುತ್ತಿದ್ದೀರಿ ಎಂದಿದ್ದಾರೆ.
ಇದರಿಂದ ಕುಪಿತಗೊಂಡ ಆರೋಪಿತರು ಗುಂಪು ಕಟ್ಟಿಕೊಂಡು ಏಕಾಏಕಿ ದಲಿತರ ಮನೆಗಳಿಗೆ ನುಗ್ಗಿ, ಹತ್ತಾರು ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಐವರು ಮಹಿಳೆಯರು, ಆರು ಮಂದಿ ಪುರುಷರು ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಟಂದೇವರ ಕೋಟೆ ಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಸಂಬಂಧ 15 ಜನರ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆಗಸ್ಟ್ 3ರಂದು ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

— ಮಾರುತಿ ಪಿಎಸ್‌ಐ, ಪರಶುರಾಮಪುರ ಠಾಣೆ