ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಸಮೀಪದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಸೋಮವಾರ ಜರುಗಿದ ಪಾಲಕರ ಸಭೆಯಲ್ಲಿ ಪಿಎಸ್‌ಐ ಈರೇಶ್ ಮಾತನಾಡಿದರು. ನಾಗರಾಜ ಗೋಪಾಲಪುರ, ಕೆ. ವಸಂತ ಕುಮಾರಿ, ಟಿ. ವಿನೋದಮ್ಮ, ಸಂಪತ್‌ಕುಮಾರ್ ಇದ್ದರು. Harmony
- ಪೊಲೀಸ್ ಉಪ ನಿರೀಕ್ಷಕ ಈರೇಶ್ ಕಿವಿ ಮಾತು
ಚಳ್ಳಕೆರೆ: ವಿದ್ಯಾರ್ಥಿ ದಿಸೆಯಲ್ಲಿ ಸೌಹಾರ್ದದಿಂದ ಬದುಕುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಪೊಲೀಸ್ ಉಪ ನಿರೀಕ್ಷಕ ಈರೇಶ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಂದ ಬಾಲಕನೊಬ್ಬ ಹಲ್ಲೆಗೊಳಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಸೋಮವಾರ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರು ಮತ್ತು ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದರು. ಶಾಲಾ ಹಂತದಲ್ಲಿ ಗೆಳೆತನ ಬೆಳೆಸಿಕೊಳ್ಳಬೇಕು. ದ್ವೇಷ, ಹಿಂಸೆ ಚಟುವಟಿಕೆಗಳಿಂದ ದೂರವಿರಬೇಕು. ತಂದೆ ತಾಯಿ ಆಸೆಯಂತೆ ಓದಿ ಸಾಧನೆ ಮಾಡಬೇಕು. ಪಾಲಕರು ಮಕ್ಕಳ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬಾರದು. ತಮ್ಮ ಬದುಕು ರೂಪಿಸಿಕೊಳ್ಳಲು ವಸತಿ ಶಾಲೆಗಳ ಸೌಲಭ್ಯ ಬಳಸಿಕೊಳ್ಳಬೇಕು ಎಂದರು. ಗಲಾಟೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗೆ ಶಾಲೆಯಲ್ಲಿ ಇದ್ದು ಓದುವ ಮನಸ್ಸಿಲ್ಲ. ಕಳೆದ ವರ್ಷ ಶಾಲಾ ಕಾಂಪೌಂಡ್ ಹಾರಿ ಮನೆಗೆ ಹೋಗಿದ್ದ. ಪಾಲಕರು ಬವಂತವಾಗಿ ಆತನನ್ನು ಕರೆತಂದು ಬಿಟ್ಟು ಹೋಗಿದ್ದಾರೆ. ಹೇಗಾದರೂ ಮಾಡಿ ಮನೆಗೆ ಹೋಗುವ ಉದ್ದೇಶದಿಂದ ಹುಡುಗರ ಬಳಿ ಈ ರೀತಿ ಗಲಾಟೆ ನಾಟಕ ಮಾಡುತ್ತಾನೆ. ಆತ ಕೈ ಪರಚಿಕೊಂಡು ಗಾಯ ಮಾಡಿಕೊಂಡಿದ್ದಾನೆ. ರಾತ್ರಿ ಹೊತ್ತಲ್ಲಿ ತಣ್ಣೀರು ಸ್ನಾನ ಮಾಡುತ್ತಾನೆ. ಕೇಳಿದರೆ, ಇದರಿಂದ ಜ್ವರ ಬರುತ್ತದೆ. ಆಗ, ಮನೆಗೆ ಕರೆದುಕೊಂಡು ಹೋಗುತ್ತಾರೆ ಎನ್ನುತ್ತಾನೆ ಎಂದು ವಿದ್ಯಾರ್ಥಿಗಳು ಪೊಲೀಸರ ಮುಂದೆ ಹೇಳಿದರು.
ಪ್ರಾಚಾರ್ಯ ನಾಗರಾಜ ಗೋಪಾಲಪುರ, ಸಹ ಶಿಕ್ಷಕರಾದ ಟಿ. ವಿನೋದಮ್ಮ, ಕೆ. ವಸಂತ ಕುಮಾರಿ, ಸಂಪತ್ ಕುಮಾರ್, ಎಚ್. ಆಶಾ, ಶ್ವೇತಾ, ಮಕ್ಕಳ ಪಾಲಕರು ಹಾಜರಿದ್ದರು.