ಕರ್ನಾಟಕ-ಆಂಧ್ರ ಗಡಿಯ ವಿ.ಅಗ್ರಹಾರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಗಡಿನಾಡ ಕುಂಚಿಟಿಗ- ಒಕ್ಕಲಿಗರ ಸಮಾವೇಶ, ಕೆಂಪೇಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಆಂಧ್ರ ಶಾಸಕ ಎಂ.ಎಸ್. ರಾಜು, ಮಾಜಿ ಸಚಿವ ಎಚ್.ಬಿ. ನರಸೇಗೌಡ, ಜೆ. ರಾಜು ಇದ್ದರು. 
ಚಿತ್ರದುರ್ಗ

ಒಬಿಸಿ ಮೀಸಲು ಪಟ್ಟಿಗೆ ಕುಂಚಿಟಿಗರ ಸೇರಿಸಲು ಅಗತ್ಯ ಸಹಕಾರ

ಪ್ರಮುಖ ಮುಖ್ಯಾಂಶಗಳು

  • ಡಾ. ನಿರ್ಮಲಾನಂದನಾಥ ಸ್ವಾಮೀಜಿಗೆ ಭರವಸೆ
  • ಗಡಿನಾಡ ಕುಂಚಿಟಿಗ- ಒಕ್ಕಲಿಗರ ಸಮಾವೇಶ.
ಹಿರಿಯೂರು: ಗಡಿನಾಡ ಕುಂಚಿಟಿಗರನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ)ಸೇರಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಕರ್ನಾಟಕ-ಆಂಧ್ರ ಗಡಿ ಗ್ರಾಮ ವಿ.ಅಗ್ರಹಾರದಲ್ಲಿ ಶನಿವಾರ ಆಯೋಜಿಸಿದ್ದ ಗಡಿನಾಡ ಕುಂಚಿಟಿಗ ಒಕ್ಕಲಿಗರ ಸಮಾವೇಶ-ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಂಧ್ರ ಪ್ರದೇಶದ ಶಾಸನ ಸಭೆಯಲ್ಲಿ ಕುಂಚಿಟಿಗರ ಒಬಿಸಿ ಮೀಸಲಾತಿಗೆ ಒಪ್ಪಿಗೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಿದರೆ, ಕೇಂದ್ರ ಸರ್ಕಾರದ ಸಚಿವರ ಮೇಲೆ ಒತ್ತಡ ಹಾಕಿ ಮೀಸಲಾತಿ ಜಾರಿಗೆ ಪ್ರಯತ್ನ ಮಾಡಲಾಗುವುದು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಸಚಿವ ನಾ.ರಾ. ಲೋಕೇಶ್ ಅವರು ಆದಿಚುಂಚನಗಿರಿ ಮಠದ ಭಕ್ತರು. ಗಡಿನಾಡ ಕುಂಚಿಟಿಗ ಒಕ್ಕಲಿಗರ ಒಬಿಸಿ ಮೀಸಲಾತಿ ಬೇಡಿಕೆ ಬಗ್ಗೆ ಸ್ಥಳೀಯ ಶಾಸಕರು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಆಂಧ್ರಪ್ರದೇಶದಲ್ಲಿ ಶ್ರೀಮಠದ ಸಮಾಜಮುಖಿ ಕಾರ್ಯಗಳನ್ನು ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ತಿರುಪತಿ ಬಳಿ 20 ಎಕರೆ ಜಾಗದಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ ಆರಂಭಿಸಲಾಗುವುದು. ಸರ್ಕಾರ ಸೂಕ್ತ ಜಾಗ ನೀಡಿದರೆ ಮಡಕಶಿರಾ ತಾಲೂಕಿನ ಕುಂಚಿಟಿಗ-ಒಕ್ಕಲಿಗ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗಲು ಶಿಕ್ಷಣ ಸಂಸ್ಥೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಆಂಧ್ರದ ಗಡಿ ಗ್ರಾಮದಲ್ಲಿ ಸ್ಥಾಪಿಸಿರುವುದು ಸಂತಸ ತಂದಿದೆ. ಇಂದಿನ ಯುವ ಜನತೆ ಕೆಂಪೇಗೌಡರ ಆದರ್ಶ, ಒಕ್ಕಲಿಗರ ಸಂಸ್ಕೃತಿ, ಪರಂಪರೆ ಬಗ್ಗೆ ತಿಳಿದರೆ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ ಎಂದರು.
ಆಂಧ್ರದ ಶಾಸಕ ಎಂ.ಎಸ್. ರಾಜು ಮಾತನಾಡಿ, ಕೆಂಪೇಗೌಡರು ಒಕ್ಕಲಿಗರ ಆತ್ಮ ಗೌರವದ ಪ್ರತೀಕ. ವಿಜಯನಗರ ಸಂಸ್ಥಾನದ ಸಾಮಂತ ರಾಜನಾಗಿದ್ದ ಕೆಂಪೇಗೌಡರು ಸರ್ವಸ್ಪರ್ಶಿ ಆಡಳಿತದ ಸಂಕಲ್ಪದ ಭಾಗವಾಗಿ ಬೆಂಗಳೂರನ್ನು ಭವಿಷ್ಯದ ನಗರವನ್ನಾಗಿ ನಿರ್ಮಿಸಿದರು. ಆ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಗಡಿನಾಡ ಕುಂಚಿಟಿಗ-ಒಕ್ಕಲಿಗರು ರಾಜಕೀಯ, ಸಾಮಾಜಿಕ,ಆರ್ಥಿಕ, ಶೈಕ್ಷಣಿಕವಾಗಿ ಸಂಘಟಿತವಾಗಬೇಕು. ಕೆಂಪೇಗೌಡರು ಈ ಶತಮಾನದ ಯುಗಪುರುಷ ಎಂದು ಬಣ್ಣಿಸಿದರು.
ಎಂಎಲ್‌ಸಿ ಚಿದಾನಂದ ಗೌಡ ಮಾತನಾಡಿ, ಕೆಂಪೇಗೌಡರು ಜಾತ್ಯತೀತ ನಾಯಕನಾಗಿ ಜನ ಮೆಚ್ಚುವಂತಹ ಆಡಳಿತ, ಆಧುನಿಕ ಬೆಂಗಳೂರು ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹಾನ್ ಚೇತನ ಎಂದರು.
ಆಂಧ್ರಪ್ರದೇಶ ಸರ್ಕಾರದ ಮಾಜಿ ಕಾನೂನು ಸಚಿವ ಎಚ್.ಬಿ. ನರಸೇಗೌಡ ಮಾತನಾಡಿ, ಕರ್ನಾಟಕದಲ್ಲಿ ಒಕ್ಕಲಿಗರ ಧ್ವನಿಯಾಗಿ, ಜೀವಪರ ಕಾಳಜಿ ಹೊಂದಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಮಾಜಮುಖಿ ಚಿಂತನೆ ಯುವ ಜನತೆಗೆ ಸ್ಪೂರ್ತಿಯಾಗಿದೆ. ಒಕ್ಕಲಿಗರ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ಬಹಿರಂಗವಾಗಿ ಧ್ವನಿ ಎತ್ತಿದ ಸ್ವಾಮೀಜಿ ಅವರ ಧೈರ್ಯ ಮೆಚ್ಚುವಂತದ್ದು ಎಂದರು.
ಆಂಧ್ರ ವಿಧಾನ ಪರಿಷತ್ ಮಾಜಿ ಸದಸ್ಯ ಗುಂಡುಮಲ ತಿಪ್ಪೇಸ್ವಾಮಿ, ಆಂಧ್ರ ಒಕ್ಕಲಿಗ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಎಂ. ಜಯಣ್ಣ, ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ.ಜೆ. ರಾಜು, ಜಿ.ವಿ. ಕೃಷ್ಣಮೂರ್ತಿ, ಧನಂಜಯ್, ಎಂ.ಎಸ್. ಈರಲಿಂಗೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಹನುಮಂತರಾಯ, ಡಿ. ನರಸಿಂಹಮೂರ್ತಿ, ಅನಂತರಾಜು, ನಳಿನಿ, ಕಾಂತರಾಜು, ಡಿ.ನಾಗರಾಜು ಇತರರು ಇದ್ದರು.