Constitution: ಮೊಳಕಾಲ್ಮೂರಲ್ಲಿ ಸಂವಿಧಾನ ದಿನಾಚರಣೆ ಜಾಥಾದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 
ಚಿತ್ರದುರ್ಗ

Constitution: ಮೊಳಕಾಲ್ಮೂರಲ್ಲಿ ಬಾಬಾ ಸಾಹೇಬರ ಚಿಂತನೆಗಳ ಜಾಗೃತಿ

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ ದಿನಾಚರಣೆಯ ಜಾಥಾ
  • 3 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗಿ
  • ಅಂಬೇಡ್ಕರ್ ಅವರ ದೂರದೃಷ್ಟಿ ಚಿಂತನೆಗಳ ಕುರಿತು ಜಾಗೃತಿ
ಮೊಳಕಾಲ್ಮೂರು: ಪಟ್ಟಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಜಾಥಾದಲ್ಲಿ 3 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಮೆರುಗು ತಂದರು.
ಸರ್ಕಾರಿ ಜೂನಿಯರ್ ಕಾಲೇಜು ಆವರಣದಿಂದ ಹೊರಟ ಜಾಥಾದಲ್ಲಿ ವಿದ್ಯಾರ್ಥಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿ ಚಿಂತನೆಗಳ ಕುರಿತು ಜಾಗೃತಿ ಮೂಡಿಸಿದರು.
ಪಟ್ಟಣದ ಮುಖ್ಯರಸ್ತೆ ಉದ್ದಕ್ಕೂ ವಿವಿಧ ಶಾಲೆಗಳ ವಿಧ್ಯಾರ್ಥಿಗಳು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಜಾಥಾದಲ್ಲಿ ಭಾಗವಹಸಿದ್ದರು. ವಾರದ ಸಂತೆ ದಿನವಾದ್ದರಿಂದ ಪಟ್ಟಣ ಜನ ದಟ್ಟಣೆಯಿಂದ ಕೂಡಿತ್ತು.
ಅರ್ಥಪೂರ್ಣ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೊಟ್ಟಿಗೆ ಸೇರಿಕೊಂಡ ಸಾರ್ವಜನಕರೂ ಸಹ ಜಯಘೋಷಗಳನ್ನು ಕೂಗಿದರು. ವಿವಿಧ ಇಲಾಖೆ ಸಿಬ್ಬಂದಿ, ನಾಗರಿಕರು ಬಾಬಾ ಸಾಹೇಬರನ್ನು ಸ್ಮರಿಸಿಕೊಂಡರು.

ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ

ತಾಪಂ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಎನ್.ವೈ. ಗೋಪಾಲಕೃಷ್ಣ, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ ಭಾರತದ ಸಂವಿಧಾನ ರಚನೆ ಮುನ್ನೆಲೆಗೆ ಬಂತು.
ಸಂವಿಧಾನ ರಚನೆಯ ನೇತೃತ್ವ ವಹಿಸಿಕೊಂಡ ಅಂಬೇಡ್ಕರ್, ಶೋಷಿತ ಸಮುದಾಯದಲ್ಲಿ ಹುಟ್ಟಿ ಕಷ್ಟ, ಕಾರ್ಪಣ್ಯಗಳನ್ನು ಅರಿತಿದ್ದ ಅವರು, ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ವ ಸ್ಪರ್ಶಿಯಾದ ಕಾನೂನುಗಳನ್ನು ರಚಿಸಿದ್ದಾರೆ ಎಂದರು.
ತಾಪಂ ಇಒ ಎಚ್. ಹನುಮಂತಪ್ಪ, ಉಪ ತಹಸೀಲ್ದಾರ್ ಮಹಾಂತೇಶ್, ಡಾ. ರಂಗಪ್ಪ, ಸಿಪಿಐ ನಾಗರಾಜ್, ಮುಖಂಡರಾದ ಎಸ್. ಜಯಣ್ಣ, ಬಿ.ಟಿ. ನಾಗಭೂಷಣ, ಎಸ್. ಖಾದರ್, ಕರಿಬಸಪ್ಪ, ಶ್ರೀನಿವಾಸಮೂರ್ತಿ, ನಾಗರಾಜ, ಕೊಂಡಾಪುರ ಪರಮೇಶಿ, ಮಹೇಶ್ ಇತರರಿದ್ದರು.