ಹಿರಿಯೂರು: ರಾಜ್ಯದಲ್ಲಿ ಈ ಹಿಂದೆ ನಡೆದ ಐದು ಉಪಚುನಾವಣೆಗಳ ಗೆಲುವು ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಜಯ ಸಾಧಿಸುವ ಮೂಲಕ ಪಕ್ಷ ಸಿಕ್ಸರ್ ಬಾರಿಸಲಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. Minister H.C. Balakrishna
ತಾಲೂಕಿನ ಹರಿಯಬ್ಬೆ, ಮುಂಗಸವಳ್ಳಿ, ಸೂಗೂರು, ಚಂದ್ರಗಿರಿ ಹಾಗೂ ಸಾಲುಣಸೆ ಗ್ರಾಮಗಳಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪಂಚ ಉಪಚುನಾವಣೆಗಳ ಗೆಲುವು ಪಕ್ಷಕ್ಕೆ ಹೊಸ ಚೈತನ್ಯ ಮತ್ತು ಬಲ ತುಂಬಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಹಿರಿಯೂರು ಕ್ಷೇತ್ರವನ್ನು ಉಳಿಸಿಕೊಳ್ಳುವುದು ನಮಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಉತ್ತಮ ವಾತಾವರಣವಿದ್ದು, ಗ್ಯಾರಂಟಿ ಯೋಜನೆಗಳು ಸಕಾರಾತ್ಮಕ ಫಲ ನೀಡಲಿವೆ. ಹಿರಿಯೂರು ತಾಲೂಕಿನಾದ್ಯಂತ ಸಾರ್ವಜನಿಕರಿಂದ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಚ್.ಡಿ. ರಂಗನಾಥ್, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು. ರಾಜ್ಯ ಸರ್ಕಾರದ ಜನಪರ ಆಡಳಿತ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಜಾತ್ಯತೀತ ತತ್ವ ಮತ್ತು ಸಾಮಾಜಿಕ ನ್ಯಾಯವೇ ಕಾಂಗ್ರೆಸ್‌ನ ಜೀವಾಳ. ಜಾತಿಗಿಂತ ನೀತಿಯ ಮೇಲೆ ರಾಜಕಾರಣ ಮಾಡಿದ್ದರಿಂದಲೇ ದಿವಂಗತ ಡಿ. ಸುಧಾಕರ್ ಅವರು ಜನನಾಯಕರಾಗಿ ಗುರುತಿಸಿಕೊಂಡು ಶಾಸಕರಾಗಿ, ಮಂತ್ರಿಯಾಗಿ ಜನಸೇವೆ ಸಲ್ಲಿಸಿದ್ದರು. ತಾಲೂಕಿನ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತದಾರರು ಆಡಳಿತ ಪಕ್ಷವನ್ನು ಬೆಂಬಲಿಸುವುದು ಅತ್ಯಗತ್ಯ. ಕ್ಷೇತ್ರದ ಜ್ವಲಂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಯುವ ಮುಖಂಡ ಸುಹಾಸ್ ಸುಧಾಕರ್, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ನಂದಿನಿಗೌಡ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಎಸ್. ಈರಲಿಂಗೇಗೌಡ, ಪ್ರಮುಖರಾದ ರಾಕ್‌ಮಂಜು, ಶಿವಕುಮಾರ್, ಗೋವಿಂದರಾಜ್, ರಾಜಣ್ಣ, ಶ್ರವಣಗೆರೆ ಚಂದ್ರು, ಗುರುಪ್ರಸಾದ್, ಜಿ.ಪಂ. ಕೆಡಿಪಿ ಸದಸ್ಯ ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಹೊಸಹಳ್ಳಿ ಸಮೀಪದ ವೇದಾವತಿ ನದಿ ಪಾತ್ರದಲ್ಲಿರುವ ಧರ್ಮಪುರ ಏತ ನೀರಾವರಿ ಯೋಜನೆ ಸ್ಥಳಕ್ಕೆ ಸಚಿವ ಎಚ್.ಸಿ. ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಗಾರಿ ಹಾಗೂ ಯೋಜನೆಯ ಪ್ರಗತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಸಚಿವರು ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮೊದಲು ನಮ್ಮೂರಿನ ಕೆರೆಗಳಿಗೆ ನೀರು ತುಂಬಿಸಿ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಸಲ್ಲಿಸಿದರು.