ಚಳ್ಳಕೆರೆ ಬೆಂಗಳೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ಶ್ರೀ ವಾಸವಿ ವೃತ್ತ. Road
ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ನಗರದಲ್ಲಿ ರಸ್ತೆಗಳ ವಿಸ್ತರಣೆ ಜತೆಗೆ ವೃತ್ತಗಳಿಗೆ ಮಹನೀಯರ ಹೆಸರಿಡಲು ಅವುಗಳನ್ನು ಅಭಿವೃದ್ಧಿ ಪಡಿಸುವ ಕೆಲಸಗಳೂ ನಡೆಯುತ್ತಿವೆ. ಈ ಮಧ್ಯೆ ವಿವಿಧ ಸಂಘಟನೆ, ಸಮುದಾಯಗಳು ತಮಗೆ ಸಂಬಂಧಿಸಿದವರ ನೇತಾರರ ವೃತ್ತಗಳ ನಿರ್ಮಾಣಕ್ಕೆ ನಗರಸಭೆ ಮೇಲೆ ಒತ್ತಡ ತರುವ ಪೈಪೋಟಿ ಏರ್ಪಟ್ಟಿದೆ. Road
ರಾಜಕೀಯ ಮತ್ತು ಆರ್ಥಿಕ ಬಲವಿರುವವ ಸಮುದಾಯದವರಿಗೆ ಸೇರಿದ ಮಹನೀಯರ ಹೆಸರಿನಲ್ಲಿ ಮಾತ್ರ ವೃತ್ತಗಳು ನಿರ್ಮಾಣವಾಗುತ್ತಿವೆ ಎನ್ನುವ ಅಪಸ್ವರದ ಮಾತುಗಳು ಕೇಳಿ ಬರುತ್ತಿರುವ ಜತೆಗೆ ಸಣ್ಣ ಮತ್ತು ಅತೀಸಣ್ಣ ಸಮುದಾಯಗಳು ಮತ್ತು ಸಂಘಟನೆಗಳು ತಮ್ಮ ಜನ ನಾಯಕರು ಮತ್ತು ಸಿನಿಮಾ ನಟರ ಹೆಸರಿನಲ್ಲಿ ವೃತ್ತಗಳ ನಿರ್ಮಾಣಕ್ಕೆ ಸ್ಥಳ ನಿಗಧಿಪಡಿಸುವಂತೆ ಒತ್ತಾಯಿಸಿ ಮನವಿಗಳನ್ನು ಸಲ್ಲಿಸಿದ್ದಾರೆ.
ಕೆಲ ಸಂಘಟನೆಗಳು ಬಹಿರಂಗವಾಗಿಯೇ ಮನವಿ ಸಲ್ಲಿಸಿ ಒತ್ತಡ ತರುತ್ತಿದ್ದಾರೆ. ಇನ್ನು ಕೆಲವರು ಜನಪ್ರತಿನಿಧಿಗಳ ಮೂಲಕ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ತಂದು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ.
ನಗರದಲ್ಲಿ ಸಂಚಾರ ಅಡಚಣೆ ನಿವಾರಿಸುವ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಚರ್ತುಪಥ ರಸ್ತೆಗಳ ವಿಸ್ತರಣೆ ಕಾರ್ಯ ನಡೆದಿದೆ.
ನಗರದ ಹೃದಯಭಾಗ ನೆಹರೂ ವೃತ್ತದಿಂದ ಚಿತ್ರದುರ್ಗ ರಸ್ತೆ ಮಾರ್ಗದಲ್ಲಿ 3 ಕಿಮೀವರೆಗೆ ಮಧ್ಯ ಭಾಗದಿಂದ ಎರಡೂ ಕಡೆಗೆ 50 ಅಡಿಯಷ್ಟು ವಿಸ್ತರಣೆ ಮಾಡಲಾಗಿದೆ. ಈ ಭಾಗದಲ್ಲಿ ಅಂಬೇಡ್ಕರ್, ವಾಲ್ಮೀಕಿ, ಕನಕದಾಸ ವೃತ್ತಗಳು ನಿರ್ಮಾಣವಾಗಿವೆ.
ನೆಹರೂ ವೃತ್ತದಿಂದ ಬೆಂಗಳೂರು ರಸ್ತೆ ಮಾರ್ಗದಲ್ಲಿ ಎರಡು ಕಿಮೀವರೆಗೆ ಮಧ್ಯ ಭಾಗದದಿಂದ 50 ಅಡಿ ವಿಸ್ತರಿಸಲಾಗಿದೆ. ಈ ಮಾರ್ಗದಲ್ಲಿದ್ದ ಬಸವೇಶ್ವರ ವೃತ್ತವನ್ನು ನವೀಕರಿಸಲಾಗಿದೆ. ಇದೀಗ ಶ್ರೀ ವಾಸವಿ ವೃತ್ತ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ನೆಹರೂ ವೃತ್ತದಿಂದ ಬಳ್ಳಾರಿ ರಸ್ತೆ ಮಾರ್ಗದಲ್ಲಿ ಈಗಾಗಲೇ 1.5 ಕಿಮೀವರೆಗೆ ರಸ್ತೆ ವಿಸ್ತರಣೆ ಕಾರ್ಯ ಪೂರ್ಣಗೊಂಡಿದೆ. ಇನ್ನು ನೆಹರೂ ವೃತ್ತದಿಂದ ಪಾವಗಡ ರಸ್ತೆಯಲ್ಲಿ 3 ಕಿಮೀವರೆಗೆ ವಿಸ್ತರಣೆ ಕಾರ್ಯ ವಿವಾದಕ್ಕೆ ಕಾರಣವಾಗಿ ಅಪೂರ್ಣಗೊಂಡಿದೆ.
ರಸ್ತೆ ವಿಸ್ತರಣೆ ಪೂರ್ಣಗೊಂಡ ಬಳಿಕ ಮದಕರಿನಾಯಕ, ಬಿ. ಕೃಷ್ಣಪ್ಪ, ಶ್ರೀ ಕೃಷ್ಣ, ವಿಶ್ವಕರ್ಮ, ಟಿಪ್ಪು ಸುಲ್ತಾನ್, ಪುನೀತ್, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ವಿಷ್ಣುವರ್ಧನ್, ಭಗೀರಥ, ಮಾಚಿದೇವ ಮತ್ತಿತರ ಹೆಸರುಗಳನ್ನು ವೃತ್ತಗಳಿಗೆ ನಾಮಕರಣ ಮಾಡಿಸಲು ನಗರಸಭಾ ಆಡಳಿತಕ್ಕೆ ಮನವಿಗಳು ಸಲ್ಲಿಕೆಯಾಗಿವೆ.