ಖಂಡೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಗೆ ಸಚಿವ ಎಚ್.ಸಿ. ಬಾಲಕೃಷ್ಣ ಆಗಮಿಸಿದರು. ಮುಖಂಡರಾದ ಸುಹಾಸ್, ಈರಲಿಂಗೇಗೌಡ, ತಿಮ್ಮಣ್ಣ, ಚಂದ್ರು, ಶಿವು ಉಪಸ್ಥಿತರಿದ್ದರು. Hiriyur irrigation
ಚಿತ್ರದುರ್ಗ

ಹಿರಿಯೂರಿನ ನೀರಾವರಿ ಯೋಜನೆ ಜಾರಿಗೆ ಬದ್ಧ: ಸಚಿವ ಎಚ್.ಸಿ. ಬಾಲಕೃಷ್ಣ ಭರವಸೆ Minister H.C. Balakrishna

ಖಂಡೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆ

ಹಿರಿಯೂರು: ತಾಲೂಕಿನ ಸಮಗ್ರ ಅಭಿವೃದ್ಧಿ ಜತೆಗೆ ನೀರಾವರಿ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಹೇಳಿದರು. Minister H.C. Balakrishna

ತಾಲೂಕಿನ ಖಂಡೇನಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಗಡಿ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿದ್ದು, ನೀರಾವರಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಧರ್ಮಪುರ ಹೋಬಳಿಯ ರೈತರ ನೀರಿನ ಬೇಡಿಕೆ ಬಗ್ಗೆ ಅರಿವಿದೆ. ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದುಕೊಳ್ಳಲಾಗುವುದು. ರೈತರ ನಿಯೋಗದ ಜತೆಗೂಡಿ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನೀರಾವರಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ, ಜಲ ಸಂಕಷ್ಟದ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಕೇವಲ ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಿ ಹೋದರೆ ಜನ ಮೆಚ್ಚುವುದಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ದಿವಂಗತ ಡಿ. ಸುಧಾಕರ್ ನಡುವೆ ಅಣ್ಣ ತಮ್ಮಂದಿರಂತಹ ಗಾಢ ಸ್ನೇಹವಿತ್ತು. ಸುಧಾಕರ್ ಅವರ ಮೇಲೆ ಡಿ.ಕೆ. ಶಿವಕುಮಾರ್ ಅವರಿಗೆ ಅಪಾರ ಪ್ರೀತಿ, ವಿಶ್ವಾಸವಿತ್ತು. ಈಗಲೂ ಅವರ ಕುಟುಂಬದ ಮೇಲೆ ಅದೇ ರೀತಿಯ ಅಭಿಮಾನವಿದೆ ಎಂದು ಸ್ಮರಿಸಿದರು.

2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರ

ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಶ್ರೀರಕ್ಷೆಯಾಗಿದೆ. ಜನರ ವಿಶ್ವಾಸ ಗಳಿಸಿ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಪಕ್ಷವು ನನಗೆ ಧರ್ಮಪುರ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಂಘಟನೆ ಹಾಗೂ ಉಪ ಚುನಾವಣೆ ಜವಾಬ್ದಾರಿ ನೀಡಿದೆ. ಸ್ಥಳೀಯರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರವಣಗೆರೆ ಗೌಡಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಎಲ್ಲ ಜಾತಿ, ಜನಾಂಗದವರಿಗೆ ಸಾಮಾಜಿಕ ನ್ಯಾಯ ಸಿಕ್ಕಿದೆ. ಉಪ ಚುನಾವಣೆ ಗೆಲುವಿಗೆ ಕಾರ್ಯಕರ್ತರು ಸನ್ನದ್ಧರಾಗಿದ್ದು, ಅವರಿಗೆ ಬಲ ತುಂಬುವ ಕೆಲಸವಾಗಬೇಕು ಎಂದರು.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಕ್ ಮಂಜು ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ, ಬಿಜೆಪಿಗೆ ಜನರ ಬೆಂಬಲವಿಲ್ಲ. ಸುಹಾಸ್ ಸುಧಾಕರ್ ಅವರಿಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದ್ದು, ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾಜಿ ಶಾಸಕ ರಾಜು, ಯುವ ಮುಖಂಡ ಸುಹಾಸ್ ಸುಧಾಕರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಈರಲಿಂಗೇಗೌಡ, ಮುಖಂಡರಾದ ವೆಂಕಟೇಶ್, ಈಶ್ವರಪ್ಪ, ಎಸ್.ಕೆ. ಶಿವಮೂರ್ತಿ, ಜ್ಯೋತಿ ಹನುಮಂತರಾಯ, ಕಾಂಚನಾ, ಡಿ. ಚಿದಾನಂದ್, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಶ್ರವಣಗೆರೆ ಚಂದ್ರು, ಮಧು, ನಿವೃತ್ತ ಯೋಧ ಶಿವಣ್ಣ, ಗುಂಡಪ್ಪ, ಕೃಷ್ಣಮೂರ್ತಿ, ಜಿ. ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಕಿರಣ್ ಮತ್ತಿತರರಿದ್ದರು.

ಮಾಡು ಇಲ್ಲವೇ ಮಡಿ ಹೋರಾಟ

ಜಿಪಂ ಕೆಡಿಪಿ ಸದಸ್ಯ ಪಿ.ಡಿ. ಕೋಟೆ ತಿಮ್ಮಣ್ಣ ಮಾತನಾಡಿ, ದಿವಂಗತ ಡಿ. ಸುಧಾಕರ್ ಅವರ ಇಚ್ಛಾಶಕ್ತಿಯಿಂದ ಗಡಿ ಗ್ರಾಮಗಳಲ್ಲಿ ಅಭಿವೃದ್ಧಿ ಪರ್ವಕ್ಕೆ ಅಡಿಗಲ್ಲು ಬಿದ್ದಿತ್ತು. ಈಗ ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಸುಹಾಸ್ ಸುಧಾಕರ್ ಗೆಲುವಿಗೆ ಮಾಡು ಇಲ್ಲವೇ ಮಡಿ ಹೋರಾಟ ನಡೆಸಬೇಕಿದೆ ಎಂದರು.

ಗಡಿ ಗ್ರಾಮಗಳ ನೀರಿನ ಬೇಡಿಕೆ

ಧರ್ಮಪುರ ಹೋಬಳಿಯ ಗಡಿ ಗ್ರಾಮಗಳಾದ ಹಲಗಲದ್ದಿ, ಮದ್ದಿಹಳ್ಳಿ, ಖಂಡೇನಹಳ್ಳಿ, ಹೊಸಕೆರೆ, ಬೇತೂರು ಹಾಗೂ ಅರಳೀಕೆರೆ ಕೆರೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿ ಆದೇಶ ಹೊರಡಿಸಿದರೆ ಮಾತ್ರ ಜನರ ಬಳಿ ತೆರಳಿ ಮತ ಕೇಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಯೋಜನೆಗೆ ಆದ್ಯತೆ ಮೇರೆಗೆ ಅನುಮೋದನೆ ನೀಡಬೇಕು ಎಂದು ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಚಿವರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಕಾರ್ಯಕರ್ತರಿಗೆ ಗಾಳ

ಉಪ ಚುನಾವಣೆ ಗೆಲುವಿಗೆ ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ಧರ್ಮಪುರ ಹೋಬಳಿಯಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಹಿನ್ನೆಲೆಯಲ್ಲಿ ಅಲ್ಲಿನ ಮುಖಂಡರ ಮನೆಗಳಿಗೆ ಸೌಜನ್ಯದ ಭೇಟಿ ನೀಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಜೆಡಿಎಸ್ ಶಕ್ತಿ ಕುಂದಿಸಲು ಸಚಿವ ಬಾಲಕೃಷ್ಣ ಅವರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ.