ಮಧುರೆಯಲ್ಲಿ ಆಯೋಜಿಸಿದ್ದ ಸಾಮರಸ್ಯದ ನಡಿಗೆ ಸಮಾಜದ ಪರಿವರ್ತನೆ ಕಡೆಗೆ ಪಾದಯಾತ್ರೆಗೆ ಕೆ.ಎಸ್. ಕಲ್ಮಠ ಚಾಲನೆ ನೀಡಿದರು. ಬಸವರಾಜ, ಪ್ರವೀಣ್ ಇತರರಿದ್ದರು. Foot March
ಚಿತ್ರದುರ್ಗ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ

ಸಮಾಜಸೇವಕ ಕೆ.ಎಸ್. ಕಲ್ಮಠ ಕರೆ

ಹೊಸದುರ್ಗ: ಯುವಜನರು ಮದ್ಯವ್ಯಸನ ಮತ್ತು ಮಾದಕ ವಸ್ತುಗಳಿಂದ ದೂರವಿದ್ದು, ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಸಮಾಜಸೇವಕ ಕೆ.ಎಸ್. ಕಲ್ಮಠ ತಿಳಿಸಿದರು.

ತಾಲೂಕಿನ ಮಧುರೆ ಗ್ರಾಮದಲ್ಲಿ ಸೋಮವಾರ ಎಸ್. ನಿಜಲಿಂಗಪ್ಪ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಶಾಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನದ 12ನೇ ವಾರದ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾಮರಸ್ಯದ ನಡಿಗೆ ಸಮಾಜದ ಪರಿವರ್ತನೆ ಕಡೆಗೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ನಶಾಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನದ ಅಂಗವಾಗಿ ತಾಲೂಕಿನ ಮಧುರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಯುವಜನರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಮದ್ಯಪಾನದಿಂದ ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಮದ್ಯಪಾನದ ಪರಿಣಾಮಗಳ ಕುರಿತು ಅರಿವು ಮೂಡಿಸಿ, ದುಶ್ಚಟ ತ್ಯಜಿಸಿ ಉತ್ತಮ ಜೀವನ ನಡೆಸುವಂತೆ ಜನರಿಗೆ ಮನವಿ ಮಾಡಲಾಗಿದೆ. ಜಾಗೃತಿ ಪಾದಯಾತ್ರೆ ಮದುರೆ ಗ್ರಾಮದಿಂದ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಗ್ರಾಮಗಳಿಗೂ ವಿಸ್ತರಿಸಲಾಗುವುದು ಎಂದರು.

ತುಂಬಿನಕೆರೆ ಬಸವರಾಜ್ ಮಾತನಾಡಿ, ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರ ಆಯೋಜಿಸಿ 60ಕ್ಕೂ ಹೆಚ್ಚು ಜನರಿಗೆ ಮದ್ಯ ಬಿಡಿಸುವ ಕೆಲಸ ಮಾಡಿದೆ ಎಂದರು.

ಬಸವರಾಜ ಮಾಳಿಗೆ, ಎಂ.ಜಿ. ಪ್ರವೀಣ್, ಬಿ.ಪಿ. ಓಂಕಾರಪ್ಪ, ವೇದಮೂರ್ತಿ, ಚಂದ್ರಶೇಖರ, ಸಂತೋಷ ಇತರರಿದ್ದರು.