ಹಿರಿಯೂರು: ತಾಲೂಕಿನ ಕಲ್ವಳ್ಳಿ ಭಾಗದ 21 ಹಳ್ಳಿಗಳ ವ್ಯಾಪ್ತಿಯ ಕೆರೆ, ಕಟ್ಟೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಅನುಷ್ಠಾನ ಸಾಧ್ಯತೆ ಕುರಿತು ತಕ್ಷಣ ವರದಿ ಸಲ್ಲಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಯೋಜನೆ ಶುರುವಿಗೆ ಮುನ್ನ ಅಸಮಾಧಾನ ಎಂಬ ತಲೆಬರಹದಲ್ಲಿ ರೈತರ ಆಕ್ರೋಶದ ಬಗ್ಗೆ ಅ. 28ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಟಿ. ರುಮೂರ್ತಿ ಅವರು ಅಜಯ್ ಧರಮ್ಸಿಂಗ್ ಮತ್ತು ಎಚ್.ಸಿ. ಬಾಲಕೃಷ್ಣ ಅವರ ಗಮನಕ್ಕೆ ತಂದು ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಕಲ್ವಳ್ಳಿ ಭಾಗದ ಜನರ ದಶಕದ ಹೋರಾಟಕ್ಕೆ ಮಣಿದ ಸರ್ಕಾರ 244 ಕೋಟಿ ರೂ. ವೆಚ್ಚದಲ್ಲಿ ಗಾಯತ್ರಿ ಜಲಾಶಯ ಸೇರಿದಂತೆ 16 ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಈ ಯೋಜನೆಯಲ್ಲಿ ಮೂಲ ಕಲ್ವಳ್ಳಿ ಭಾಗದ 21 ಗ್ರಾಮ ಕೈ ಬಿಡಲಾಗಿದೆ, ಏತ ನೀರಾವರಿ ಯೋಜನೆಯಲ್ಲಿ ಸೇರ್ಪಡೆ ಮಾಡುವಂತೆ ರೈತರು ಉಪ ಚುನಾವಣೆ ಬಹಿಷ್ಕಾರ, ಹೋರಾಟದ ಎಚ್ಚರಿಕೆ ನೀಡಿದ್ದರು.
ದಿಂಡಾವರ ಗ್ರಾಮದಲ್ಲಿ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ಸಿಎಂ ಡಿ.ಕೆ.ಶಿವಕುಮಾರ್ ಯೋಜನೆಯಿಂದ ಕೈ ಬಿಟ್ಟಿರುವ ಕೆರೆಗಳ ಸೇರ್ಪಡೆ, ನೀರಿನ ಲಭ್ಯತೆ, ಯೋಜನೆ ಕಾರ್ಯಗತ ಕುರಿತು ಅಧ್ಯಯನ ಮಾಡಿ, ತಕ್ಷಣ ಸರ್ಕಾರಕ್ಕೆ ವರದಿ ಕೊಡಿ ಹಾಗೂ ಯೋಜನೆ ಅನುಷ್ಠಾನಕ್ಕೆ ಡಿಪಿಆರ್ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.