ನಾಗಸಮುದ್ರದಲ್ಲಿ ನೀರಿನ ಬೋರ್​ವೆಲ್​ಗೆ ಸಂಪರ್ಕ ಕೊಟ್ಟಿರುವ ವಿದ್ಯುತ್​ ವಿತರಣೆ ಪೆಟ್ಟಿಗೆ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ. Water
ಚಿತ್ರದುರ್ಗ

ಮನೆ ತಲುಪದ ಶುದ್ಧ ಜಲ!

ಜೆಜೆಎಂ ಯೋಜನೆ ಅವಾಂತರಕ್ಕೆ ಜನರ ಹಿಡಿಶಾಪ

ಕೆ. ಕೆಂಚಪ್ಪ ಮೊಳಕಾಲ್ಮೂರು

ನಡು ರಸ್ತೆಯಲ್ಲೇ ಪೈಪ್​ಲೈನ್​ ಚರಂಡಿಗಳು, ಕಿತ್ತು ಹೋದ ನಲ್ಲಿ ಮತ್ತು ಮೀಟರ್​ಗಳು, ರಭಸವಾಗಿ ಹರಿಯದ ನೀರು, ಶುದ್ಧ್ದವಾಗಿ ಸಿಗಬೇಕಾಗಿದ್ದ ಕುಡಿಯುವ ನೀರಿನಲ್ಲಿ ಅಶುದ್ಧತೆಯದ್ದೇ ಬಹುಪಾಲು. ಐದು ವರ್ಷವಾದರೂ ಮುಗಿಯದ ಕಾಮಗಾರಿ...!

ಬರದ ತಾಲೂಕಿನಲ್ಲಿ ಬಹು ನಿರೀಕ್ಷೆ ಹಾಗೂ ಸಂತಸ ಮೂಡಿಸಿದ್ದ ಜೆಜೆಎಂ ಶುದ್ಧ ಕುಡಿಯುವ ನೀರು ಯೋಜನೆ ಅವಾಂತರದ ಸ್ಯಾಂಪಲ್​ಗಳಿವು.

ಕೇಂದ್ರದ ಮಹತ್ವಪೂರ್ಣ ಯೋಜನೆ ಮೊಳಕಾಲ್ಮೂರು ತಾಲೂಕಿನಲ್ಲಿ ಬಹುತೇಕ ಹಳ್ಳ ಹಿಡಿದಿದೆ. ಆರಂಭದಲ್ಲಿ ಶಾಶ್ವತ ಪರಿಹಾರ ಎಂಬ ಉತ್ಸಾಹದ ಭರವಸೆಯಲ್ಲಿ ಜನಮನ್ನಣೆ ಪಡೆದಿದ್ದ ಯೋಜನೆ ಅಧಿಕಾರಿಗಳ ರ್ನಿಲಕ್ಷ ಹಾಗೂ ಗುತ್ತಿಗೆ ದಾರರ ಬೇಕಾಬಿಟ್ಟಿ ಕಾಮ ಗಾರಿಯಿಂದ ಯೋಜನೆಗೆ ಗ್ರಹಣ ಹಿಡಿದಿದೆ.

5 ವರ್ಷಗಳ ಹಿಂದೆ ಬರಪೀಡಿದ ಪ್ರದೇಶದ ಜನರಿಗೆ ಶಾಶ್ವತ ಕುಡಿ ಯುವ ನೀರಿನ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ತುಂಗಭದ್ರಾ ಹಿನ್ನೀರು ಲಭ್ಯತೆ ಆಧಾರದಲ್ಲಿ ತಾಲೂಕಿನ 128 ಹಳ್ಳಿಗಳ ಪ್ರತಿ ಮನೆಗೆ ಶುದ್ಧ ಗಂಗೆ ಕೊಡಲು 113 ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಸೂಕ್ತ ಯೋಜನೆ, ಯೋಚನೆ ಕೊರತೆಯಿಂದ ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆಯಲ್ಲೇ ಪೈಪ್​ಲೈನ್​ ಹಾಕಲಾಗಿದೆ.

ತೆಗೆದ ಗುಂಡಿ ಸರಿಯಾಗಿ ಮುಚ್ಚಿಲ್ಲ. ಮನೆಗಳಿಗೆ ಅಳವಡಿಸಿದ ನಲ್ಲಿ ಮತ್ತು ಮೀಟರ್​ ಕಿತ್ತು ಹೋಗಿವೆ. ಗುಣಮಟ್ಟದ ಪೈಪ್​ಲೈನ್​ ಹಾಕದ ಕಾರಣ ನೀರಿನ ಸೋರಿಕೆಯಿಂದ ಸಮರ್ಪಕ ನೀರೂ ಸಿಗುತ್ತಿಲ್ಲ. ಇದರಿಂದ ಜನರು ಅಧಿಕಾರಿಗಳನ್ನು ದೂರುವಂತಾಗಿದೆ.

ಗ್ರಾಮೀಣ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ ಕೋಟಿ ಕೋಟಿ ಹಣ ಸುರಿದರೂ ಅಧಿಕಾರಿಗಳ ನಿರುತ್ಸಾಹ ಹಾಗೂ ಗುತ್ತಿಗೆದಾರರ ಕಳಪೆ ಕೆಲಸದಿಂದ ಜೆಜೆಎಂ ಯೋಜನೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಸಿಇಒಗೆ ಗ್ರಾಮಸ್ಥರ ಪತ್ರ

ನಾಗಸಮುದ್ರದಲ್ಲಿ ಜೆಜೆಎಂ ಯೋಜನೆ ಕಳಪೆ ಕೆಲಸದಿಂದ ಅನೇಕ ಬಾರಿ ಪೈಪ್​ನಲ್ಲಿ ಚರಂಡಿ ನೀರು ಮಿಶ್ರವಾಗಿ ಬರುತ್ತಿದೆ. ನಿರ್ವಹಣೆ ಹೊತ್ತಿರುವ ಸ್ಥಳಿಯ ಗ್ರಾಪಂ ಆಡಳಿತದ ಅಧಿಕಾರಿಗಳ ರ್ನಿಲಕ್ಷದಿಂದ ಅಶುದ್ಧ ನೀರು ಸೇವನೆ ಮಾಡುವಂತಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲ. ಕುಡಿಯುವ ನೀರಿಗಾಗಿ ಬಳಸುತ್ತಿರುವ ಬೋರ್​ವೆಲ್​ ತಿಪ್ಪೆ ಮಧ್ಯದಲ್ಲಿದ್ದರೂ ಗಮನಿಸುತ್ತಿಲ್ಲ. ಈ ಕುರಿತು ಪಿಡಿಒ ಅವರಿಗೆ ಪ್ರಶ್ನಿಸಿದರೆೆ ಹಾರಿಕೆ ಉತ್ತರ ಕೊಡುತ್ತಾರೆ. ಹಾಗಾಗಿ, ಬೇಸತ್ತು ಗ್ರಾಮಸ್ಥರೆಲ್ಲರೂ ಸೇರಿ ಜಿಪಂ ಸಿಇಒ ಅವರಿಗೆ ಪತ್ರ ಬರೆದಿದ್ದೇವೆ ಎಂದು ಗ್ರಾಮದ ಎಸ್​.ಎಂ. ಓಬಳೇಶ ಮಾಹಿತಿ ನೀಡಿದರು.

ಮೀಟರ್​ ಇದ್ದರೂ ಮೋಟರ್​ ಬೇಕು!

ಅವೈಜ್ಞಾನಿಕ ಕಾಮಗಾರಿಯಿಂದ ನಲ್ಲಿ ಅನುಷ್ಠಾನಗೊಳಿಸಿದ ಎಲ್ಲ ಮನೆಗಳಿಗೆ ನೀರು ಸಮರ್ಪಕವಾಗಿ ರಭಸವಾಗಿ ಹರಿದು ಬರುತ್ತಿಲ್ಲ. ಹೀಗಾಗಿ, ಜನರು ಅನಿವಾರ್ಯವಾಗಿ ಮೋಟರ್​ ಅಳವಡಿಸಿ ನೀರು ಪಡೆಯುವಂತಾಗಿದೆ. ಇದರಿಂದ ಮೋಟರ್​ ಇಲ್ಲದ ಮನೆಗಳಿಗೆ ನೀರು ಸಿಗದ ಕಾರಣ ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಮೀಟರ್​ ಇದ್ದರೂ ಮೋಟರ್​ ಮೂಲಕವೇ ನೀರು ಪಡೆಯುವಂತಾಗಿದ್ದು, ನೀರಿನ ಕಂದಾಯ ಕಟ್ಟುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ ಸ್ಥಳಿಯರು.

ನಾಗಸಮುದ್ರದಲ್ಲಿ ಶುದ್ಧ ಗಂಗೆ ಯೋಜನೆ ಪೈಪ್​ಲೈನ್​ ಸೋರಿಕೆ, ನಲ್ಲಿ ಮತ್ತು ಮೀಟರ್​ ದುರಸ್ತಿಯಲ್ಲಿವೆ. ಅವುಗಳನ್ನು ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ನೀರು ರಭಸವಾಗಿ ಬರುತ್ತಿಲ್ಲ ಎಂದು ಕೆಲವರು ಮನೆ ನಲ್ಲಿಗೆ ಮೋಟಾರ್​ ಮೂಲಕ ನೀರು ಶೇಖರಣೆ ಮಾಡಿಕೊಳ್ಳುತ್ತಾರೆ. ಇದರಿಂದ ನೀರಿನ ಸಮಸ್ಯೆ ಉಂಟಾಗಿದೆ.
ಪ್ರದಿಪ್​ ಪಿಡಿಒ
ಶುದ್ಧ ಗಂಗಾ ಯೋಜನೆ ಸಮರ್ಪಕ ಬಳಕೆಯಾಗಬೇಕು. ನೀರು ಬರುತ್ತಿಲ್ಲವೆಂದು ನಲ್ಲಿ, ಮೀಟರ್​ ಹಾಗೂ ವಾಲ್​ ಮುರಿದು ಹಾಕಿ ನೀರು ವ್ಯರ್ಥ ಮಾಡುವ ವರ್ತನೆ ಸರಿಯಲ್ಲ. ಶುದ್ಧ ನೀರು ಪ್ರತಿ ಮನೆಗೆ ತಲುಪಲು ಎಲ್ಲ ರೀತಿ ಸೂಕ್ತ ಕ್ರಮ ವಹಿಸಬೇಕೆಂದು ಪಿಡಿಒಗಳಿಗೆ ಖಡಕ್​ ಸೂಚನೆ ಕೊಡಲಾಗಿದೆ.
ಎಚ್​. ಹನುಮಂತಪ್ಪ ಇಒ
ತಾಲೂಕಿನ 8 ಹಳ್ಳಿಗಳಲ್ಲಿ ಜೆಜೆಎಂ ಯೋಜನೆ ಕಾಮಗಾರಿ ಕೆಲಸ ಪೂರ್ಣ ಹಂತದಲ್ಲಿದೆ. ಉಳಿದ 120 ಹಳ್ಳಿಗಳಿಗೆ ಈಗಾಗಲೇ ನೀರು ಸರಬರಾಜು ಆಗುತ್ತಿದೆ. ಕೆಲವಡೆ ನೀರು ಸೋರಿಕೆಯಿಂದ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ದೂರುಗಳಿವೆ. ಅದನ್ನು ಸರಿಪಡಿಸಲು ಸ್ಥಳಿಯ ಗ್ರಾಪಂ ಪಿಡಿಒಗಳಿಗೆ ನಿರ್ವಹಣೆ ವಹಿಸಲಾಗಿದೆ.
ವಿಲಾಸ್​ ಬೋಸ್ಲೆ ಎಇಇ ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ವಿಭಾಗ ಮೊಳಕಾಲ್ಮೂರು