ಹಿರಿಯೂರು ತಾಲೂಕಿನ ಶೇಷಪ್ಪನಹಳ್ಳಿ ಗೊಲ್ಲರಹಟ್ಟಿಯ ಚಿತ್ರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಕಾಡುಗೊಲ್ಲ ಸಮುದಾಯದ ಮುಖಂಡ ಸಿ.ಬಿ. ಪಾಪಣ್ಣ ಪೂಜೆ ಸಲ್ಲಿಸುವ ಮೂಲಕ ಉಪ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದರು. ದೊಡ್ಡ ಚಿತ್ತಪ್ಪ, ಪೂಜಾರ್ ಚಿತ್ತಯ್ಯ, ಯಶೋದರ, ಹಳ್ಳಪ್ಪ ಇತರರು ಇದ್ದರು. meeting
- ಹಿರಿಯೂರು ಕ್ಷೇತ್ರದ ಉಪ ಚುನಾವಣೆ
- ಗರಿಗೆದರಿದ ಆಕಾಂಕ್ಷಿಗಳ ಉತ್ಸಾಹ
- ದೇವಾಲಯಗಳಿಗೆ ಭೇಟಿ
ಹಿರಿಯೂರು: ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಸುಧಾಕರ್ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಆಯೋಗ ದಿನಾಂಕ ಘೋಷಿಸುವ ಮೊದಲೇ ಆಕಾಂಕ್ಷಿಗಳು ಪ್ರಚಾರ ಆರಂಭಿಸಿದ್ದಾರೆ. meeting
ಶಾಸಕತ್ವದ ಅವಧಿ ಕೇವಲ ಒಂದೂವರೆ ವರ್ಷ ಇದ್ದು, ಈಗ ಕೋಟಿಗಟ್ಟಲೆ ಬಂಡವಾಳ ಹಾಕುವ ಬದಲು ಮೌನವಾಗಿರುವುದು ಲೇಸು ಎಂದು ಹೇಳುತ್ತಿದ್ದ ವಿವಿಧ ಪಕ್ಷಗಳ ಆಕಾಂಕ್ಷಿಗಳು, ದಿನ ಕಳೆದಂತೆ ಚುನಾವಣೆಯಲ್ಲಿ ಹೆಚ್ಚು ಆಸಕ್ತರಾಗುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಎನ್‌ಡಿಎ ಅಭ್ಯರ್ಥಿಗಳು ತಾವೇ ಎಂದು ಘೋಷಿಸಿಕೊಂಡು ಬೆಂಬಲಿಗರೊಂದಿಗೆ ಪ್ರಚಾರ ಆರಂಭಿಸಿದ್ದಾರೆ. ಸಂಜೆ ವೇಳೆ ನಗರ ಹಾಗೂ ಹೊರ ಭಾಗದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ.
ಪ್ರಚಾರ ಆರಂಭ: ಇತ್ತೀಚೆಗೆ ದಿ. ಸುಧಾಕರ್ ಪುತ್ರ ಸುಹಾಸ್ ಸುಧಾಕರ್ ಖಂಡೇನಹಳ್ಳಿಯ ಶನೈಶ್ಚರ ಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಿಗೆ ತಾಯಿ, ಸಹೋದರಿ ಜತೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬೆಂಬಲಿಗರೊಂದಿಗೆ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ನಿತ್ಯ ಒಂದಲ್ಲ ಒಂದು ಹಳ್ಳಿಗೆ ಭೇಟಿ ನೀಡುತ್ತಿರುವ ಅವರು ಮನೆಮನೆಗೆ ಹೋಗಿ ಮತದಾರರನ್ನು ಸಂಪರ್ಕಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಪಾಪಣ್ಣರಿಂದ ಪ್ರಚಾರಕ್ಕೆ ಚಾಲನೆ: ಜಿಪಂ ಮಾಜಿ ಸದಸ್ಯ ಹಾಗೂ ಕಾಡುಗೊಲ್ಲ ಸಮುದಾಯದ ಮುಖಂಡ ಸಿ.ಬಿ. ಪಾಪಣ್ಣ ಶನಿವಾರ ಜೆ.ಜಿ. ಹಳ್ಳಿಯ ವಿನಾಯಕ, ಶೇಷಪ್ಪನಹಳ್ಳಿ ಗೊಲ್ಲರಹಟ್ಟಿಯ ಚಿತ್ರಲಿಂಗೇಶ್ವರ, ಬೇಟೆಮರದಹಟ್ಟಿಯ ಭೂತೇಶ್ವರ, ಹೊಸಹಳ್ಳಿಯ ಆಂಜನೇಯ, ವಾಲ್ಮೀಕಿ ನಗರ, ದಿಂಡಾವರದ ಶನೈಶ್ಚರ ದೇಗುಲಗಳಿಗೆ ಬೆಂಬಲಿಗರೊಂದಿಗೆ ತೆರಳಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.
ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಡುಗೊಲ್ಲರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಈ ಬಾರಿ ಕಾಂಗ್ರೆಸ್ ಟಿಕೆಟ್ ದಿ.ಡಿ.ಸುಧಾಕರ್ ಕುಟುಂಬದವರಿಗೆ ನೀಡದೇ ಇದ್ದರೆ ತನಗೇ ಕೊಡಬೇಕು ಎಂದು ಪಾಪಣ್ಣ ಮನವಿ ಮಾಡಿದರು.
ದೊಡ್ಡ ಚಿತ್ತಪ್ಪ, ಪೂಜಾರ್ ಚಿತ್ತಯ್ಯ, ಯಶೋಧರ, ಹಳ್ಳಪ್ಪ, ರಾಜಪ್ಪ, ಜಯಪ್ಪ, ವೀರೇಶ್, ದೇವರಾಜು, ರಾಮಚಂದ್ರಯ್ಯ, ಉದಯಕುಮಾರ್, ಕಾಂತಣ್ಣ, ಕೃಷ್ಣಪ್ಪ, ಮುನಿಕುಮಾರ್, ಶ್ರೀನಿವಾಸ್, ಚಿತ್ರಲಿಂಗಪ್ಪ, ಮೀಸೆ ಕೃಷ್ಣಪ್ಪ ಇತರರಿದ್ದರು.