ಸಿರಿಗೆರೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಡಿ.ಜಿ. ಸುದೀನ್‌ಕುಮಾರ್, ಕೆ.ಎಸ್. ವಿಜಯ್, ಜೆ.ಬಿ. ತಿಪ್ಪೇಸ್ವಾಮಿ, ಎಚ್.ವಿ. ವಾಮದೇವಪ್ಪ. ವೀರಣ್ಣ ಎಸ್ ಜತ್ತಿ. ಬಿ. ಮೂಗಪ್ಪ ಇದ್ದರು. Law
- ನ್ಯಾ. ಸುದೀನ್ ಕುಮಾರ್ ಅಭಿಪ್ರಾಯ
- ಸಿರಿಗೆರೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಸಿರಿಗೆರೆ: ಆಹಾರ ಎಷ್ಟು ಮುಖ್ಯವೋ, ಬದುಕಿಗೆ ಕಾನೂನುಗಳು ಕೂಡ ಅಷ್ಟೇ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಜೆ. ಸುದೀನ್ ಕುಮಾರ್ ಹೇಳಿದರು. Law
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಭವಿಷ್ಯ ನಿರ್ಮಾಣ ಮಾಡುವ ಹೊಣೆ ವಿದ್ಯಾರ್ಥಿಗಳ ಮೇಲಿದೆ. ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಹೊಸ ತಲೆಮಾರಿನವರಿಗೆ ಹಿರಿಯರ ಬಗ್ಗೆ ಗೌರವ ಹಾಗೂ ಕಾನೂನಿನ ಅರಿವು ಇಲ್ಲದಿರುವುದು ವಿಷಾದನೀಯ. ಸಮಾಜಕ್ಕೆ ಕಂಟಕರಾಗದೆ ಉತ್ತಮ ಚಿಂತನೆ ಮತ್ತು ಆದರ್ಶಗಳೊಂದಿಗೆ ಬದುಕಬೇಕು. ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳ ಬಾರದು. ಒಳ್ಳೆಯ ಆಯ್ಕೆಗಳು ಉತ್ತಮ ಬದುಕು ರೂಪಿಸುತ್ತವೆ. ಜೀವನದಲ್ಲಿ ಫೇಲಾಗಬಾರದು ಎಂಬ ಮನೋಭಾವ ಇರಬೇಕು. ಸೋಲೇ ಗೆಲುವಿನ ಸೋಪಾನ ಎಂಬ ಮಾತನ್ನು ನೆನಪಿಟ್ಟುಕೊಂಡು ಯಾವುದೇ ಕಾರಣಕ್ಕೂ ನಮ್ಮನ್ನು ನಾವೇ ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.
ಪ್ರತಿ ವಿದ್ಯಾರ್ಥಿಯೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಹಸಿದವರಿಗೆ ಅನ್ನ, ಜ್ಞಾನ ಹಂಚಬೇಕು. ತಪ್ಪು ಕಲ್ಪನೆ, ಭ್ರಮೆಗಳಿಂದ ಹೊರಬಂದು ಶ್ರೇಷ್ಠತೆ ಸಾಧಿಸುವ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ತಿಳಿಸಿದರು.
ಹಿರಿಯ ವಕೀಲ ಕೆ.ಎಸ್. ವಿಜಯ್ ಮಾತನಾಡಿ, ದೈಹಿಕ ಆರೋಗ್ಯವಷ್ಟೇ ಅಲ್ಲ, ನಮ್ಮ ಸುತ್ತಮುತ್ತಲಿನ ಪರಿಸರವನ್ನೂ ಆರೋಗ್ಯಕರವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು. ಶಿಕ್ಷಣ ಉದ್ಯೋಗಕ್ಕಾಗಿ ಮಾತ್ರವಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಸಮಾಜ ನಿರ್ಮಾಣಕ್ಕೆ ಅಗತ್ಯ. ಮಹಾತ್ಮ ಗಾಂಧೀಜಿ, ಬಸವಣ್ಣನವರಂತಹ ಆದರ್ಶಗಳು ನಮ್ಮ ಬದುಕಿನ ಮೂಲಮಂತ್ರವಾಗಬೇಕು. ನೊಂದ ಸಮಾಜಕ್ಕೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವುದೇ ಇಂತಹ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದು ತಿಳಿಸಿದರು. ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಅವುಗಳ ಅರಿವು ಹೊಂದುವುದು ಅಗತ್ಯ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಯಾವುದೇ ಆಸೆ, ಅಮಿಷಗಳಿಗೆ ಬಲಿಯಾಗದೆ ವಿವೇಕದಿಂದ ನಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಮತ್ತು ಬದ್ಧತೆ ಹೊಂದಿರಬೇಕು ಎಂದರು. ಸಾಮಾಜಿಕ ಜವಾಬ್ದಾರಿಯೊಂದಿಗೆ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯವಶ್ಯಕ ಎಂದು ಸಲಹೆ ನೀಡಿದರು.
ತಾಲೂಕು ಶಿಕ್ಷಣಾಧಿಕಾರಿ ಬಿ. ಮೂಗಪ್ಪ , ಹಿರಿಯ ವಕೀಲ ಜಿ.ಬಿ. ತಿಪ್ಪೇಸ್ವಾಮಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಚಿನ್ಮಯಿ ಪ್ರಾರ್ಥಿಸಿದರು. ಪ್ರಾಚಾರ್ಯ ಜಿ. ಸಂತೋಷ್‌ಕುಮಾರ್ ಸ್ವಾಗತಿಸಿದರು. ಎಚ್.ಎ. ವಿಶ್ವಕುಮಾರ್ ನಿರೂಪಿಸಿದರು. ರಾಜಶೇಖರಯ್ಯ ವಂದಿಸಿದರು.