ಸೂರನಹಳ್ಳಿ ಶ್ರೀನಿವಾಸ್ 
ಚಿತ್ರದುರ್ಗ

ಬಯಲು ಸೀಮೆ ಜನರಿಗೆ ಕುಡಿವ ನೀರು ಕೊಟ್ಟ ಬಿಎಸ್‌ವೈ

ಪ್ರಮುಖ ಮುಖ್ಯಾಂಶಗಳು

  • ಪಗಡಲಬಂಡೆ ಸಮೀಪ ಚೆಕ್‌ಡ್ಯಾಂ ನಿರ್ಮಾಣ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಅನುದಾನ
  • ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹೇಳಿಕೆ
ಚಳ್ಳಕೆರೆ: ತಾಲೂಕಿನ ಪಗಡಲಬಂಡೆ ಸಮೀಪ ವೇದಾವತಿ ನದಿಗೆ ಚೆಕ್‌ಡ್ಯಾಂ ನಿರ್ಮಾಣಕ್ಕೆ 2012 ರಲ್ಲಿ ಅನುದಾನ ಮಂಜೂರಾತಿ ಮಾಡುವ ಮೂಲಕ ಬಯಲು ಸೀಮೆ ಜನರಿಗೆ ಶಾಶ್ವತವಾಗಿ ಕುಡಿಯುವ ನೀರಿನ ಅನುಕೂಲ ಕಲ್ಪಿಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮೇ 9 ರಂದು ಆಯೋಜಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಹಿನ್ನೆಲೆಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿ, ಅವರ ಕೊಡುಗೆ ಸ್ಮರಿಸಿದರು.
ಬಯಲು ಸೀಮೆ ಚಳ್ಳಕೆರೆ ತಾಲೂಕಿನಲ್ಲಿ ಯಾವುದೇ ಜಲಾಶಯಗಳಿಲ್ಲ. ಇದು ಕಡಿಮೆ ಮಳೆ ಬೀಳುವ ಪ್ರದೇಶ. ತಾಲೂಕಿನ ಜೀವನಾಡಿ ವೇದಾವತಿ ನದಿಗೆ ಚೆಕ್ ಡ್ಯಾಂ ನಿರ್ಮಿಸಿ ಹರಿಯುವ ನೀರು ತಡೆದು ಕುಡಿಯುವ ನೀರಿನ ಅನುಕೂಲ ಮಾಡಿದ್ದು ಬಿ.ಎಸ್. ಯಡಿಯೂರಪ್ಪ ಹಾಗೂ ಆಗ ನೀರಾವರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಎಂದು ತಿಳಸಿದರು.
ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆ ಭದ್ರಾ ಮೇಲ್ದಂಡೆ ಯೋಜನೆಗೆ 2009 ರಲ್ಲಿ ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಅದರ ಫಲವಾಗಿ ಪ್ರಸ್ತುತ ಯೋಜನೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಇದರಿಂದ ಚಳ್ಳಕೆರೆ ತಾಲೂಕಿನ 59 ಕೆರೆಗಳಿಗೆ ನೀರು ದೊರೆಯಲಿದೆ ಎಂದು ತಿಳಿಸಿದರು.
1.25 ಕೋಟಿ ಅನುದಾನ: ಮತ್ಸಮುದ್ರ ಗ್ರಾಮದ ಸಾವಯವ ಕೃಷಿಕ ಚನ್ನಬಸಪ್ಪ ಅವರ ಜಮೀನಿಗೆ 2010 ರಲ್ಲಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದರು. ಜಮೀನಿನ ಫಸಲು ವೀಕ್ಷಿಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಗ್ರಾಮದ ಐತಿಹಾಸಿಕ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದಾಗ 25 ಲಕ್ಷ ರೂ. ಘೋಷಣೆ ಮಾಡಿದರು. ನಂತರ ಆ ದೇವಸ್ಥಾನ ನೋಡಬೇಕು ಎಂದು ವೇದಿಕೆಯಿಂದ ಕೆಳಗಿಳಿದ ಕೂಡಲೇ ಶ್ರೀ ರಾಮ ಜನ್ಮಭೂಮಿ ತೀರ್ಪು ನಮ್ಮಂತೆ ಆಗಿದೆ ಎಂದು ಅವರಿಗೆ ಮೊಬೈಲ್ ಕರೆ ಬಂದಿದೆ. ಈ ಗ್ರಾಮದ ಶ್ರೀ ಆಂಜನೇಯ ಸ್ವಾಮಿಗೆ ಬಹಳ ಶಕ್ತಿ ಇದೆ. ಆತನ ಸನ್ನಿಧಿಗೆ ಹೊರಟಾಗಲೇ ಶುಭ ಸಂದೇಶ ಬಂದಿದೆ. ಇನ್ನು ಒಂದು ಕೋಟಿ ರೂ. ಹೆಚ್ಚಾಗಿ ಬಿಡುಗಡೆ ಮಾಡುವುದಾಗಿ ಹೇಳಿ ಒಟ್ಟು 1.25 ಕೋಟಿ ರೂ. ಅನುದಾನ ನೀಡಿದ್ದರು. ಈ ಅನುದಾನ ಬಳಕೆಯಿಂದ 25 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಒಳ ಭಾಗದ ಶಿಖರ, ಒಂದು ಕೋಟಿ ವೆಚ್ಚದಲ್ಲಿ ಹೊರಭಾಗದ ಗೋಪುರ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ರಾಜಕೀಯ ಶಕ್ತಿ: ಬಸವರಾಜ ಮಂಡಿಮಠ್, ಕಾಟಪ್ಪನಹಟ್ಟಿ ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ಕರೆತಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆ ಮಾಡಿವದರು ಯಡಿಯೂರಪ್ಪ ಎನ್ನುತ್ತಾರೆ ರಾಜಕೀಯ ವಲಯದ ಮುಖಂಡರು.
10 ಲಕ್ಷ ಕಾರ್ಯಕರ್ತರು: ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಸುಮಾರು ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260 ಬೂತ್‌ಗಳಿಂದಲೂ ಜನ ಆಗಮಿಸಲಿದ್ದಾರೆ. ಪ್ರತಿ ಹಳ್ಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರದಿಂದ ಹದಿನೈದು ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸೂರನಹಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.