ದೇವರ ಮರಿಕುಂಟೆಯ ಗ್ರಾಮೀಣ ಸಾಹಿತ್ಯ ಪರಿಷತ್ ಕಾರ್ಯಾಲಯ. Kannada
ಚಿತ್ರದುರ್ಗ

ಬಯಲುಸೀಮೆಯ ಬರಡಲ್ಲೂ ಅರಳಿದ ಅಕ್ಷರ ಕುಸುಮಗಳು

ಕನ್ನಡದ ಸೊಬಗು ಹೆಚ್ಚಿಸಿದ ಚಳ್ಳಕೆರೆ

ಕೊರ್ಲಕುಂಟೆ ತಿಪ್ಪೇಸ್ವಾಮಿ, ಚಳ್ಳಕೆರೆ

ಬಯಲುಸೀಮೆ ಎಂದರೆ ಬರೀ ಬರಡು ನೆಲವಲ್ಲ, ಅದು ಕನ್ನಡ ಸಾರಸ್ವತ ಲೋಕಕ್ಕೆ ಅಕ್ಷರದ ಸುಧೆ ಹರಿಸಿದ ಫಲವತ್ತಾದ ಸಾಹಿತ್ಯ ಭೂಮಿ! ವಿಶಿಷ್ಟ ಕೃತಿಗಳ ಮೂಲಕ ತಾಯ್ನುಡಿ ಕನ್ನಡದ ಸೊಬಗನ್ನು ಹೆಚ್ಚಿಸುವಲ್ಲಿ ಚಳ್ಳಕೆರೆ ತಾಲೂಕಿನ ಸಾಹಿತಿಗಳ ಕೊಡುಗೆ ಅನನ್ಯವಾಗಿದೆ.

ರಾಷ್ಟ್ರಕವಿ ಕುವೆಂಪು ಅವರಿಗೆ ವಿದ್ಯಾ ಗುರುಗಳಾಗಿದ್ದ ತಳುಕಿನ ಟಿ.ಎಸ್. ವೆಂಕಣ್ಣಯ್ಯ, ಕಾದಂಬರಿ ಸಾರ್ವಭೌಮ ತರಾಸು, ಬೆಳಗೆರೆ ಜಾನಕಮ್ಮ, ಬೆಳಗೆರೆ ಕೃಷ್ಣಶಾಸಿಗಳಂತಹ ದಿಗ್ಗಜರ ಮನೆತನ ಕನ್ನಡ ಸಾಹಿತ್ಯ ಲೋಕಕ್ಕೆ ಭದ್ರ ಬುನಾದಿ ಹಾಕಿದವು. ಆ ಪರಂಪರೆ ಮುಂದುವರಿಸಿದ ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ಬಂಜಗೆರೆ ಜಯಪ್ರಕಾಶ್, ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ, ಡಾ.ಸಿ. ಶಿವಲಿಂಗಪ್ಪ, ಪಿ. ತಿಪ್ಪೇಸ್ವಾಮಿ ಹಾಗೂ ತಿಪ್ಪಣ್ಣ ಮರಿಕುಂಟೆ ಅವರು ಮಹತ್ವದ ಕೃತಿ ನೀಡಿದ್ದಾರೆ.

ಇಂದು ಹೊಸ ತಲೆಮಾರಿನ ಸಾಹಿತ್ಯ ಕೃಷಿಕರ ದಂಡೇ ತಾಲೂಕಿನಲ್ಲಿ ಸಕ್ರಿಯವಾಗಿದೆ. ಮೋದೂರು ತೇಜ, ಕೊರ್ಲಕುಂಟೆ ತಿಪ್ಪೇಸ್ವಾಮಿ, ಡಾ.ಕೆ. ಚಿತ್ತಯ್ಯ, ಡಾ. ಶ್ರೀನಿವಾಸರಾಜು ದೊಡ್ಡೇರಿ, ಜಿ.ಟಿ. ಈರಣ್ಣ ಪಿಲ್ಲಹಳ್ಳಿ, ಜಡೇಕುಂಟೆ ಮಂಜುನಾಥ್, ಸಿದ್ದಾಪುರ ಮನುಶ್ರೀ, ಗೀತಾ ನಾಗರಾಜ, ಶಿವಗಂಗಮ್ಮ, ಡಿ. ಶಬ್ರಿನ ಮಹಮ್ಮದ್ ಅಲಿ, ಪಗಡಲಬಂಡೆ ನಾಗೇಂದ್ರಪ್ಪ, ಕ್ಯಾದಿಗುಂಟೆ ನರಸಿಂಹಮೂರ್ತಿ, ಟಿ.ಜೆ. ತಿಪ್ಪೇಸ್ವಾಮಿ, ಎ. ಮಂಜುನಾಥ ಹೀಗೆ ಅನೇಕರು ಕತೆ, ಕವನ, ಪ್ರಬಂಧ ಪ್ರಕಾರಗಳಲ್ಲಿ ನಿರಂತರವಾಗಿ ಕೃಷಿ ಮಾಡುತ್ತಿದ್ದಾರೆ.

ಕುಗ್ರಾಮದಲ್ಲಿ ಸಾಹಿತ್ಯದ ಕಂಪು

ದೇಸಿ ಕತೆಗಾರ ಎಂದೇ ಖ್ಯಾತರಾಗಿರುವ ತಿಪ್ಪಣ್ಣ ಮರಿಕುಂಟೆ ಅವರಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಿ ರುವುದು ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಗ್ರಾಮೀಣ ಸಾಹಿತ್ಯ ಪರಿಷತ್ ಸ್ಥಾಪಿಸಿ, ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಂದ ಉದ್ಘಾಟಿಸುವ ಮೂಲಕ ಕುಗ್ರಾಮದಲ್ಲೂ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದದ ಕಂಪು ಹರಡಿದ ಕೀರ್ತಿ ಇವರದು. ಬರಗೂರು ರಾಮಚಂದ್ರಪ್ಪ, ಎಲ್. ಹನುಮಂತಯ್ಯ, ಕಾಳೇಗೌಡ ನಾಗವಾರ, ಹಾಸ್ಯ ಸಾಹಿತಿ ಅ.ರಾ.ಸೇ ಅವರಂತಹ ದಿಗ್ಗಜರನ್ನು ಹಳ್ಳಿಗೆ ಕರೆಸಿ ಅಕ್ಷರ ಜಾಗೃತಿ ಮೂಡಿಸಿದ್ದಾರೆ.

ಮಣ್ಣಿನ ಸೊಗಡಿನ ಬರವಣಿಗೆ

ಪತ್ರಿಕೆಯೊಂದರ ಸಂಪಾದಕರಾಗಿ, ಅಂಕಣಕಾರ ರಾಗಿ ಪಳಗಿದ ತಿಪ್ಪಣ್ಣ, ಕಳೆದ ಮೂರು ದಶಕಗಳಿಂದ ಸಾಮಾನ್ಯ ಜನರಿಗೆ ಸಾಹಿತ್ಯ ತಲುಪಿಸುವ ಕಾಯಕದಲ್ಲಿ ತೊಡಗಿದ್ದಾರೆ. ಗ್ರಾಮೀಣ ಪರಿಸರದ ಜಾತ್ರೆ, ಉತ್ಸವ ಹಾಗೂ ಬುಡಕಟ್ಟು ಪದ್ಧತಿಗಳನ್ನೇ ವಸ್ತು ವಿಷಯವಾಗಿಸಿಕೊಂಡು, ಪ್ರಾದೇಶಿಕ ಸೊಗಡಿನ ಭಾಷೆಯಲ್ಲೇ ಕತೆ ಕಟ್ಟುವ ಮೂಲಕ ಓದುಗರ ಮನಗೆದ್ದಿದ್ದಾರೆ.

ಕೃತಿಗಳು ಮತ್ತು ಸಂದ ಗೌರವಗಳು

ತಂತ್ರಗಳು, ಜಾತ್ರೆ, ಮಹಾಮೌನಿ, ಸುತ್ತು, ದಶರಥ, ಒಂದು ಊರಿನ ಕತೆ, ಮಾತು ನನ್ನೋವ್ ಎಲ್ಡೆ ತಿಪ್ಪಣ್ಣ ಅವರ ಪ್ರಮುಖ ಕೃತಿಗಳು. ನಲವತ್ತು ವರ್ಷಗಳ ಸುದೀರ್ಘ ಸಾಹಿತ್ಯ ಸೇವೆಗಾಗಿ ಹಿರಿಯೂರಿನ ಏಕನಾಥೇಶ್ವರಿ ಸಂಗೀತ ಶಾಲೆಯಿಂದ ಕನ್ನಡ ಸಾಹಿತ್ಯ ರತ್ನ, ನೃತ್ಯ ನಿಕೇತನ ಸಂಸ್ಥೆಯಿಂದ ಸಾಹಿತ್ಯ ಚೇತನ, ಸಿಜಿಕೆ ಪಬ್ಲಿಕೇಷನ್‌ನ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಸಾಹಿತ್ಯ ಶ್ರೀ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಸಾಕ್ಷ್ಯಚಿತ್ರ ನಿರ್ಮಾಣ ಗೌರವ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದ ಗೌರವವೂ ಇವರಿಗೆ ಸಂದಿದೆ. ತಿಪ್ಪಣ್ಣ ಮರಿಕುಂಟೆ ಅವರದು ತನ್ನಂತೆ ಇತರರೂ ಬೆಳೆಯಬೇಕು ಎನ್ನುವ ವಿಶಾಲ ಮನೋಭಾವದ ವ್ಯಕ್ತಿತ್ವ. ಯುವ ಪ್ರತಿಭಾವಂತರಿಗೆ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸಿಕೊಡುವ ಅವರ ಈ ಗುಣಧರ್ಮದಿಂದಲೇ ತಾಲೂಕಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.