ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರು ಬುಧವಾರ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರದುರ್ಗ ತಾಲೂಕಿನ ೮ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದರು. ನಟ ದೊಡ್ಡಣ್ಣ, ಸುರೇಶ್‌ಬಾಬು ಇದ್ದಾರೆ.
- ಸಿಎಂಗೆ ಶಾಸಕ ಕೆ.ಸಿ. ವೀರೇಂದ್ರಪಪ್ಪಿ ಮನವಿ
- ನೀರಾವರಿ ಯೋಜನೆಗಳ ಕುರಿತು ಚರ್ಚೆ
- ಸಿದ್ದರಾಮಯ್ಯ
ಚಿತ್ರದುರ್ಗ: ತಾಲೂಕಿನ ಮಠದ ಕುರುಬರಹಟ್ಟಿ, ಕಾಟಿಹಳ್ಳಿ, ಸಿದ್ದಾಪುರ , ಮಾನಂಗಿ, ಹುಲ್ಲೂರು, ನಂದೀಪುರ, ಅನ್ನೇಹಾಳು ಮತ್ತು ತಿಮ್ಮಣ್ಣನಾಯಕನ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸಿ ನೀರು ತುಂಬಿಸಬೇಕು ಎಂದು ಸಿಎಂ ಸಿದ್ದರಾ ಮಯ್ಯ ಅವರಿಗೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರು ಬುಧವಾರ ಮನವಿ ಮಾಡಿದ್ದಾರೆ.
ಬೆಂಗಳೂರಿನ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರು, ಕೆರೆಗಳನ್ನು ತುಂಬಿಸುವ ಯೋಜನೆ ಕುರಿತಂತೆ ಚರ್ಚಿಸಿದರು. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ತಾಲೂಕಿನ ೨೮,೯೬೬ ಹೆಚ್ಚುವರಿ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಿ ೯ ಕೆರೆಗಳನ್ನು ತುಂಬಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ.
ಚಿತ್ರದುರ್ಗ ತಾಲೂಕಿನ ಕಾತ್ರಾಳು, ಮುದ್ದಾಪುರ ಮತ್ತು ಯಳಗೋಡು ಕೆರೆಗಳಿಗೆ ೦.೧೪೭ ಟಿಎಂಸಿ ನೀರನ್ನು ತುಂಬಿಸಲು ಜಗ ಳೂರು ಶಾಖಾ ಕಾಲುವೆ-೨ ಕಾಮಗಾರಿಗೆ ಯೋಜಿಸಲಾಗಿದೆ. ಆದರೆ, ಈ ೩ ಕರೆಗಳು ಕರ್ನಾಟಕ ನೀರಾವರಿ ನಿಗಮದ ಭರಮ ಸಾಗರ ಏತ ನೀರಾವರಿ ಯೋಜನೆಯಡಿ ಸೇರ್ಪಡೆಗೊಂಡಿದ್ದು, ಈಗಾಗಲೇ ಕೆರೆಗಳಿಗೆ ಪೈಪ್ ಅಳವಡಿಕೆ ಕಾಮಗಾರಿ ಕೂಡ ಪೂರ್ಣಗೊಂಡಿರುತ್ತದೆ. ಪ್ರಸ್ತುತ ಈ ೩ ಕೆರೆಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದಿಂದ ಕೈಬಿಡಲು ಈಗಾಗಲೇ ಅನುಮೋದನೆ ದೊರೆತಿದೆ.
ಆದ್ದರಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೮ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಗೆ ಸೇರಿಸುವುದರಿಂದ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಜನ, ಜಾನುವಾರುಗಳಿಗೆ ಕೂಡ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ ಎಂದು ಶಾಸಕರು ಸಿಎಂಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.