ಎನ್. ಗೌರೀಪುರದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ಜರುಗಿತು. ಉಡುಪಿಯ ಬೈಲೂರು ಮುರುಳೀಧರ ತಂತ್ರಿ, ಗೋಪಾಲಕೃಷ್ಣ ಜೋಯಿಸರು, ಸಂದೀಪ ಉಪಾಧ್ಯಾಯ ಇದ್ದರು. Ritual
- ಎನ್. ಗೌರೀಪುರದಲ್ಲಿ ಎರಡು ದಿನಗಳ ಕಾಲ ಆಚರಣೆ
- ಕರಾವಳಿಯ ಪದ್ಧತಿ ಬಯಲು ಸೀಮೆಯಲ್ಲೂ ಅನುಷ್ಠಾನ
ನಾಯಕನಹಟ್ಟಿ: ಶ್ರೀ ಉಮಾಮಹೇಶ್ವರ ದೇವಾಲಯದ ದೋಷಗಳಿಗೆ ಪರಿಹಾರ ತಿಳಿಯಲು ಸಮೀಪದ ಎನ್. ಗೌರೀಪುರದಲ್ಲಿ ಎರಡು ದಿನಗಳ ಕಾಲ ಅಷ್ಟಮಂಗಲ ದೇವ ಪ್ರಶ್ನೆ ಕೇಳಿ ಉತ್ತರಗಳನ್ನು ಪಡೆಯುವ ಪ್ರಕ್ರಿಯೆಗಳು ಶುಕ್ರವಾರ ಪೂರ್ಣಗೊಂಡವು.
ಗ್ರಾಮದಲ್ಲಿ ಉಂಟಾ ಗುತ್ತಿದ್ದ ಅಸಹಜ ಸಾವು, ನೋವು, ಸಮಸ್ಯೆಗಳಿಗೆ ಉಮಾಮಹೇಶ್ವರ ದೇವಾಲಯದ ಭಕ್ತರು ಹಾಗೂ ಮುಖಂಡರು ಪರಿಹಾರ ಹುಡುಕುತ್ತಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಎರಡು ದಿನಗಳ ಅಷ್ಟಮಂಗಲ ದೇವಪ್ರಶ್ನೆ ಕಾರ್ಯಕ್ರಮ ಜರುಗಿತು. ಈ ಪ್ರಕ್ರಿಯೆಗಳು ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದೇ ರೀತಿಯಲ್ಲಿ ಇಲ್ಲಿನ ದೇವಾಲಯದಲ್ಲಿ ಪ್ರಕ್ರಿಯೆಗಳು ಜರುಗಿದವು.
ಕವಡೆ, ವೀಳ್ಯದೆಲೆ ಇತ್ಯಾದಿಗಳನ್ನು ಬಳಸಿಕೊಂಡು ವರ್ತಮಾನ, ಭೂತ ಮತ್ತು ಭವಿಷ್ಯತ್ತನ್ನು ಅಷ್ಟಮಂಗಳ ಪ್ರಶ್ನೆ ಕೇಳುವ ಪಂಡಿತರು ವಿವರಿಸಿದರು. ಗ್ರಾಮದಲ್ಲಿ ಹಿಂದೆ ನಡೆದ ಘಟನೆಗಳನ್ನು ವಿವರಿಸಲಾಯಿತು. ನಿತ್ಯಪೂಜೆ, ಉತ್ಸವಗಳಲ್ಲಿನ ಲೋಪಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಯಿತು. ದೇವಾಲಯದ ಪ್ರಾಂಗಣದ ಗಣೇಶ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲು ತಿಳಿಸಲಾಯಿತು.
ಉಮಾಮಹೇಶ್ವರ ದೇವರನ್ನು ಮತ್ತೊಂದು ಕಡೆಯಿಂದ ತಂದು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸ ಹೊಂದಿದೆ. ದೇವಾಲಯ ಮತ್ತು ಉತ್ಸವಗಳಲ್ಲಿ ಪೂಜಾವಿಧಾನಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸೂಚಿಸಲಾಯಿತು.
ಹಚರರು ಎರಡು ದಿನಗಳ ಕಾಲ ವಿಶೇಷ ಅಷ್ಟಮಂಗಲ ಪ್ರಶ್ನೆಗಳನ್ನು ನೆರವೇರಿಸಿದರು. ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.