ಬಬ್ಬೂರು ಕೃಷಿ ವಿಜ್ಞಾನ-ಸಂಶೋಧನಾ ಕೇಂದ್ರ. 
ಚಿತ್ರದುರ್ಗ

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ, ತೋಟಗಾರಿಕೆ ಮೇಳ

ಪ್ರಮುಖ ಮುಖ್ಯಾಂಶಗಳು

  • ಆಧುನಿಕ ಕೃಷಿ ಯಂತ್ರೋಪಕರಣಗಳ ಉಪಯೋಗ ಮತ್ತು ಬಳಕೆ ಕುರಿತು ರೈತರಿಗೆ ಮಾಹಿತಿ
  • ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮ
  • ಜಿಲ್ಲೆಯ ಕೃಷಿಕರ ಆಧಾರ ಸ್ತಂಭ
ಹಿರಿಯೂರು: ಬಯಲುಸೀಮೆ ಕೃಷಿಕರ ಮಾಹಿತಿ ಕಣಜ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ  ನ.14, 15 ರಂದು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. 
ಎರಡು ದಿನಗಳ ಮೇಳದಲ್ಲಿ ಸಮಗ್ರ ಕೃಷಿ ಪದ್ಧತಿ, ಸಿರಿಧಾನ್ಯಗಳ ಮೌಲ್ಯವರ್ಧನೆ, ಸುಧಾರಿತ ಉತ್ಪಾದನಾ ತಾಂತ್ರಿಕತೆ, ಗೋಡಂಬಿ ಬೆಳೆಯ ಪ್ರಾತ್ಯಕ್ಷಿಕೆ, ಅಣಬೆ ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ ತಂತ್ರಜ್ಞಾನ, ಮೌಲ್ಯವರ್ಧಿತ ಕೃಷಿ ಉತ್ಪನ್ನ, ರೇಷ್ಮೆ ಕೃಷಿ ತಂತ್ರಜ್ಞಾನ, ರೈತ-ವಿಜ್ಞಾನಿಗಳೊಂದಿಗೆ ಸಂವಾದ, ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮ, ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ, ಆಧುನಿಕ ಕೃಷಿ ಯಂತ್ರೋಪಕರಣಗಳ ಉಪಯೋಗ ಮತ್ತು ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತದೆ.
ಕುಲಪತಿ ಆರ್.ಸಿ. ಜಗದೀಶ ಉಪಸ್ಥಿತಿಯಲ್ಲಿ ಜಿಲ್ಲಾ ಸಚಿವ ಡಿ.ಸುಧಾಕರ್ ನೂತನ ಕೃಷಿ ಪದವಿ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಗೋವಿಂದ ಎಂ.ಕಾರಜೋಳ ವಸ್ತು ಪ್ರದರ್ಶನ ಉದ್ಘಾಟಿಸುವರು, 
ಶಾಸಕರಾದ ಬಿ.ಜಿ. ಗೋವಿಂದಪ್ಪ ತಾಂತ್ರಿಕ ಕೈಪಿಡಿ, ಜಿ.ಎಚ್. ಶ್ರೀನಿವಾಸ್ ಪುಸ್ತಕ ಬಿಡುಗಡೆಗೊಳಿಸುವರು. ಟಿ. ರಘುಮೂರ್ತಿ ಅತ್ಯುತ್ತಮ ಕೃಷಿ ಕಾರ್ಮಿಕರನ್ನು ಸನ್ಮಾನಿಸುವರು. ಶಾಸಕರಾದ ಡಾ. ಎಂ. ಚಂದ್ರಪ್ಪ, ಎನ್.ವೈ. ಗೋಪಾಲಕೃಷ್ಣ, ಡಿ.ಟಿ. ಶ್ರೀನಿವಾಸ್, ಕೆ.ಎಸ್. ನವೀನ್, ಚಿದಾನಂದ್ ಗೌಡ, ನಿಗಮ ಮಂಡಳಿ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್, ಯೋಗೇಶ್‌ಬಾಬು, ರಘು, ಬಬ್ಬೂರು ಗ್ರಾಪಂ ಅಧ್ಯಕ್ಷೆ ರುದ್ರಮ್ಮ, ಡಿಸಿ ಟಿ. ವೆಂಕಟೇಶ್ ಭಾಗವಹಿಸಲಿದ್ದಾರೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ರೈತರ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಮೇಳ ನಡೆಯಲಿದೆ.
ಜಿಲ್ಲೆಯ ಕೃಷಿಕರ ಆಧಾರ ಸ್ತಂಭ
ಮೈಸೂರು ಅರಸರು ನಿರ್ಮಿಸಿದ ವಿವಿ ಸಾಗರ, ಗಾಯತ್ರಿ ಜಲಾಶಯ ಹಾಗೂ 1916 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲದಲ್ಲಿ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಮೈಸೂರಿನ ಮೊದಲ ಕೃಷಿ ನಿರ್ದೇಶಕ ಡಾ. ಲೆಸ್ಲೀ ಕೋಲ್ ಮನ್ ಬಬ್ಬೂರು ಸಮೀಪ 200 ಎಕರೆ ಭೂ ಪ್ರದೇಶದಲ್ಲಿ ವಲಯ ಕೃಷಿ-ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದರು. ಇವುಗಳು ಬಯಲು ಸೀಮೆ ರೈತರಿಗೆ ವರದಾನವಾಗಿವೆ. ಇದರೊಂದಿಗೆ 2000ರಲ್ಲಿ ಕೃಷಿ ವಿಜ್ಞಾನ ಕೇಂದ್ರ, 2010ರಲ್ಲಿ ತೋಟಗಾರಿಕೆ ಕಾಲೇಜು ಆರಂಭವಾದವು.
ಬಬ್ಬೂರು ಕೃಷಿ ಸಂಶೋಧನಾ ಕೇಂದ್ರವು 1965ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಆಡಳಿತಕ್ಕೆ ಒಳಪಟ್ಟಿತ್ತು. 2003 ರಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರವಾಗಿ ಉನ್ನತೀಕರಣ, 2009 ರಲ್ಲಿ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ(ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಡಳಿತಕ್ಕೆ ಒಳಪಟ್ಟು), 2013ರಿಂದ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿದೆ.

ಹೆಜ್ಜೆ ಗುರುತು

ಕೃಷಿ ವಿಜ್ಞಾನ-ಸಂಶೋಧನಾ ಕೇಂದ್ರವು ಜಿಲ್ಲೆಯ ಹವಾಗುಣ, ಒಣ ಬೇಸಾಯಕ್ಕೆ ಪೂರಕ ಸಂಶೋಧನೆ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿ, ಪುನಶ್ವೇತನ, ಬೇಸಾಯ ತಂತ್ರಜ್ಞಾನ, ಹೊಸ ತಳಿಕಳ ಅಭಿವೃದ್ಧಿ, ಸುಧಾರಿತ ಯಂತ್ರೋಪಕರಣ ಸೇರಿ ಕೃಷಿ ಕ್ಷೇತ್ರದ ಸುಧಾರಣೆಗೆ ಶ್ರಮಿಸುತ್ತಿದೆ.

ತೋಟಗಾರಿಕೆ ವಿವಿಗೆ ಬೇಡಿಕೆ

 ಭದ್ರೆ ಬಯಲುಸೀಮೆ ಪ್ರವೇಶಿದ ನಂತರ ವಿವಿ ಸಾಗರ ಜಲಾಶಯ ಮೂರು ಬಾರಿ ಭರ್ತಿಯಾಗಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳು ವಿಸ್ತರಣೆಯಾಗಿದೆ. ಮಧ್ಯ ಕರ್ನಾಕಟದ ಕೃಷಿಕರಿಗೆ ನೆರವಾಗಲು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಬೇಕೆಂಬ ಬೇಡಿಕೆಯೂ ಇದೆ. 

ಭದ್ರೆ ವಿವಿ ಸಾಗರದ ಒಡಲು ಸೇರಿದ ನಂತರ ಜಿಲ್ಲೆಯಲ್ಲಿ ನೀರಾವರಿ ಕೃಷಿ ವಿಸ್ತರಣೆಯಾಗಿದೆ. ಅಂತರ್ಜಲ ವೃದ್ಧಿ, ವೇದಾವತಿ ನದಿಯ ಜೀವಂತಿಕೆಗೆ ವರದಾನವಾಗಿದೆ. ಕೃಷಿ-ತೋಟಗಾರಿಕೆ ಮೇಳ ಜಿಲ್ಲೆಯ ರೈತರಿಗೆ ಮಾಹಿತಿ ಕಣಜವಾಗಬೇಕು. ತೋಟಗಾರಿಕೆ ವಿವಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

ಚಿತ್ರದುರ್ಗ ಜಿಲ್ಲೆಯ ಕೃಷಿಕರ ಮಾಹಿತಿ ಕಣಜ ಎಂದು ಖ್ಯಾತಿ ಪಡೆದಿರುವ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಎರಡು ದಿನಗಳ ಕಾಲ ಕೃಷಿ ಮೇಳ ನಡೆಯಲಿದ್ದು, ಬಯಲುಸೀಮೆ ರೈತರಿಗೆ ಪೂರಕ ಮಾಹಿತಿ ನೀಡಲಾಗುತ್ತಿದೆ. ಕೃಷಿ ಯಂತ್ರಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.