ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೃಷಿ ಮೇಳಕ್ಕೆ ಸಂಸದ ಗೋವಿಂದ ಕಾರಜೋಳ ಚಾಲನೆ ನೀಡಿದರು. ಎಂಎಲ್ಸಿ ಕೆ.ಎಸ್.ನವೀನ್, ಶಿವಣ್ಣ, ಡಾ.ಶರಣಪ್ಪ, ಡಾ.ಓಂಕಾರಪ್ಪ ಇದ್ದರು.
- ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ 2ನೇ ಸ್ಥಾನ
- 2025ನೇ ಸಾಲಿನ ದೇಶದ ಜಿಡಿಪಿಗೆ ಶೇ.18 ಕೊಡುಗೆ
- ದೇಶದ ಖಜಾನೆ ತುಂಬುವ ಮೂಲಕ ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬು
ವಿಜಯವಾಣಿ ಸುದ್ದಿಜಾಲ ಹಿರಿಯೂರು
ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ. 2025ನೇ ಸಾಲಿನ ದೇಶದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಶೇ.18 ರಷ್ಟಿದೆ. ರೈತರು ನಮಗೆಲ್ಲ ಅನ್ನ ನೀಡುವುದಲ್ಲದೆ, ದೇಶದ ಖಜಾನೆ ತುಂಬುವ ಮೂಲಕ ರಾಷ್ಟ್ರದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ತಾಲೂಕಿನ ಬಬ್ಬೂರು ಕೃಷಿ ವಿಜ್ಞಾನ-ಸಂಶೋಧನಾ ಕೇಂದ್ರದ ಆವರಣದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ಕೃಷಿ ಹಾಗೂ ತೋಟಗಾರಿಕೆ ಮೇಳ-2025 ಉದ್ಘಾಟಿಸಿ ಮಾತನಾಡಿದರು.
ಇಂದು ಭಾರತ 350 ಮಿಲಿಯನ್ ಮೆಟ್ರಿಕ್ ಟನ್ ಕೃಷಿ ಉತ್ಪಾದನೆ ಮಾಡುತ್ತಿದೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದೇವೆ. ಅದರೂ ರೈತರ ಪರಿಸ್ಥಿತಿ ಇನ್ನೂ ಸುಧಾರಣೆಯಾಗಬೇಕಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸಬೇಕಿದೆ ಎಂದರು.
ಹೊಸ ವಿಚಾರ, ತಂತ್ರಜ್ಞಾನ, ತೋಟಗಾರಿಕೆ ವಿಸ್ತರಣೆ, ಜೈವಿಕ ಕೃಷಿ ಉತ್ಪಾದನೆ, ಪುಷ್ಪ ಕೃಷಿ, ಮೀನುಗಾರಿಕೆ ಸೇರಿ ಎಲ್ಲ ಆಯಾಮಗಳಲ್ಲಿ ರೈತರಿಗೆ ನೆರವು ನೀಡಿ, ಆರ್ಥಿಕ ಶಕ್ತಿ ತುಂಬುವ ಯೋಜನೆಗಳ ಬಗ್ಗೆ ಕೃಷಿ ಮೇಳದಲ್ಲಿ ಮಾಹಿತಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
10 ಸಾವಿರ ರೈತ ಉತ್ಪಾದಕ ಸಂಘಗಳನ್ನು ಒಗ್ಗೂಡಿಸಿ ಸೊಸೈಟಿಗಳನ್ನು ಸ್ಥಾಪಿಸಲಾಗುತ್ತಿದೆ. ನಮೋ ಡ್ರೋನ್ ದೀದಿ ಯೋಜನೆಯಡಿ ಮಹಿಳಾ ರೈತ ಸಂಘಗಳಿಗೆ 400 ಕೋಟಿ ರೂ. ಮೌಲ್ಯದ ಕೃಷಿ ಡ್ರೋನ್‌ಗಳನ್ನು ನೀಡಲಾಗಿದೆ. ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗಿದೆ. ನೀರನ್ನು ಮಿತವಾಗಿ ಬಳಕೆ ಮಾಡಲು ಪಿಎಂ ಕಿಸಾನ್ ಸಿಂಚಾಯಿ ಯೋಜನೆ ಜಾರಿ ಮಾಡಲಾಗಿದೆ.
ಕೃಷಿ ವಿಜ್ಞಾನಿಗಳು ಹಾಗೂ ವಿಶ್ವ ವಿದ್ಯಾಲಯಗಳು ಸಂಶೋಧನೆಯ ಫಲಿತಾಂಶಗಳನ್ನು ರೈತರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಕೃಷಿ ಪದವಿ ಪಡೆದು ಕ್ಲರ್ಕ್‌ಗಳಾಗಬೇಡಿ:
ಕೃಷಿ ಪದವಿ ಪಡೆದವರು, ವಿಜ್ಞಾನಿ, ಇಂಜಿಯರ್, ಸರ್ಕಾರದ ಕಚೇರಿಗಳಲ್ಲಿ ಕ್ಲರ್ಕ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಸಬ್ ರಿಜಿಸ್ಟ್ರಾರ್ ಕೆಲಸಕ್ಕೆ ಸೇರುವ ಬದಲು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಬಿಎಸ್‌ಸಿ ಅಗ್ರಿಕಲ್ಚರ್, ಎಂಎಸ್‌ಸಿ ಅಗ್ರಿಕಲ್ಚರ್ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಓದಿನ ಬಳಿಕ ವಿದ್ಯಾರ್ಥಿಗಳು ಕ್ಲರ್ಕ್‌ಗಳಾಗಿ ಕೆಲಸಕ್ಕೆ ಸೇರಿದರೆ ಸಮಾಜಕ್ಕೆ ಪ್ರಯೋಜನವಿಲ್ಲ. ಕೃಷಿ ಕ್ಷೇತ್ರಕ್ಕೆ ನೀವು ಆಸ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯ ಒಂದು ಸಾವಿರ ಯುವ ರೈತರಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಕೃಷಿ ಅಧ್ಯಯನ ಪ್ರವಾಸ ಏರ್ಪಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜಿಲ್ಲೆಯ ಈರುಳ್ಳಿ ಬೆಳಗಾರರು ಅನುಭವಿಸುತ್ತಿರುವ ನಷ್ಟದ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಗಮನ ಸಳೆಯಲಾಗಿದೆ ಎಂದರು.
ಈರುಳ್ಳಿ ಬೆಳೆಯುವ ರೈತರು ಸಹಕಾರ ಸಂಘ ರಚಿಸಿಕೊಂಡು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಸ್ಥಾಪಿಸುವ ಪ್ರಯತ್ನ ಮಾಡಬೇಕು. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಸಂವಿಧಾನ, ಜತೆಗೆ ಜೈ ಸಹಕಾರ ಮಂತ್ರವನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಿಸಿದ ವಿವಿಧ ಕೈಪಿಡಿ ಹಾಗೂ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪ್ರಗತಿಪರ ರೈತರು ಹಾಗೂ ಬಬ್ಬೂರು ಫಾರಂನಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಎಚ್.ಡಿ.ದೇವಿಕುಮಾರ್, ಎಚ್.ಎಸ್. ಶಶಾಂಕ್, ಡಾ.ಶ್ರೀನಿವಾಸ, ನಿರ್ದೇಶಕರಾದ ಡಾ.ಬಿ.ಹೇಮ್ಲಾನಾಯ್ಕಾ, ಡಾ.ಬಿ.ಎಂ.ದುಷ್ಯಂತಕುಮಾರ್, ಡಾ.ಜೆ.ಕೆ.ಗಿರಿಜೇಶ್, ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಶರಣಪ್ಪ ಜಂಗಂಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಂಜುನಾಥ, ತೋಟಗಾರಿಕೆ ಜಂಟಿ ನಿರ್ದೇಶಕಿ ಡಾ.ಜಿ.ಸವಿತಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿ.ಎಚ್.ಕಾಂತರಾಜ, ಜಿಲ್ಲಾ ಪ್ರತಿನಿಧಿ ಕೆ.ಜಗದೀಶ್ ಕಂದಿಕೆರೆ, ಮುಖಂಡರಾದ ಉಮೇಶ್, ತಿಪ್ಪೇಸ್ವಾಮಿ, ಕೆ.ಎಸ್.ಹೊರಕೇರಪ್ಪ, ಮುರಳಿ, ಅಭಿನಂದನ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಸಿದ್ದರಾಮಣ್ಣ ಇತರರಿದ್ದರು.
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಡಿ.ಸುರೇಶ, ಹಿರಿಯ ವಿಜ್ಞಾನಿ ಡಾ.ಪರಶುರಾಮ ಚಂದ್ರವಂಶಿ ವಂದಿಸಿದರು. ಏಕಬೋಟೆ ಸ್ವಾಗತಿಸಿದರು. ವಿಜ್ಞಾನಿ ಡಾ.ಪ್ರೀತಿ ನಿರೂಪಿಸಿದರು.
ಮೇಳದಲ್ಲಿ ಕೃಷಿ ವಸ್ತು ಪ್ರದರ್ಶನ, ದೇಸಿ ತಳಿಯ ಹಸು, ಮೇಕೆ, ಕುರಿ, ಕೋಳಿ, ಕೃಷಿ, ಯಂತ್ರೋಪಕರಣ, ಸಿರಿಧಾನ್ಯ ಮೌಲ್ಯವರ್ಧನೆ, ಕೃಷಿ ಪರಿಕರಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಕೇಂದ್ರ-ರಾಜ್ಯ ಸರ್ಕಾರ ರೈತರ ನೆರವಿಗೆ ಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವಂತೆ ರೈತರು ಒತ್ತಾಯಿಸಿದರಾದರೂ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡದೆ ವೇದಿಕೆಯಿಂದ ತೆರಳಿದರು. ಸಂಸದರ ನಡೆಗೆ ರೈತರು ಬೇಸರಿಸಿದರು. ಈರುಳ್ಳಿ ಬೆಳೆಗಾರರ ಹಿತ ಕಾಯಲು ಪರಿಹಾರದ ಕ್ರಮ, ಬೆಳೆ ಸಂರಕ್ಷಣೆ ಕುರಿತು ಎಂಎಲ್ಸಿ ಕೆ.ಎಸ್.ನವೀನ್ ಸ್ಪಷ್ಟನೆ ನೀಡಿದರು.