ಹೊಸದುರ್ಗದಲ್ಲಿ ಶನಿವಾರ ಎಸ್‌ಎನ್‌ಇಆರ್‌ಡಿ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ನಶೆ ಮುಕ್ತ ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಚಾಲನೆ ನೀಡಿದರು. ಪಿಐ ಕೆ.ಟಿ. ರಮೇಶ್, ಶಿವಲಿಂಗಪ್ಪ, ಕೆ.ಎಸ್. ಕಲ್ಮಠ, ಎಂ.ಬಿ. ತಿಪ್ಪೇಸ್ವಾಮಿ, ಲೋಕೇಶ್ವರ್ ಇದ್ದರು. Intoxicating 
ಚಿತ್ರದುರ್ಗ

ಯುವಶಕ್ತಿ ನಶೆ ಮುಕ್ತಗೊಳಿಸಲು ಸಂಕಲ್ಪ ಅಗತ್ಯ Intoxicating

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಸಲಹೆ
  • ವಿಕಸಿತ ಭಾರತ ಸಂಕಲ್ಪ ಅಭಿಯಾನ

ಹೊಸದುರ್ಗ: ಯುವಶಕ್ತಿ ಮಾದಕ ವ್ಯಸನಗಳಿಗೆ ಬಲಿಯಾಗದಂತೆ ತಡೆಯುವ ಮೂಲಕ ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.

Intoxicating

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಎಸ್. ನಿಜಲಿಂಗಪ್ಪ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ನಶೆ ಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನತೆ ದೇಶದ ಅಭಿವೃದ್ಧಿಯ ಸೂಚ್ಯಂಕ. ಸುಶಿಕ್ಷಿತ ಯುವ ಶಕ್ತಿ ಹೊಂದಿರುವ ಕಾರಣದಿಂದ ವಿಶ್ವ ಮಟ್ಟದಲ್ಲಿ ಭಾರತ ಸಾಧನೆ ಮಾಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಇದರಿಂದ ದೇಶದ ಶಕ್ತಿ ದುರ್ಬಲವಾಗಲಿದೆ. ಯುವಕರು ಇದರ ಗಂಭೀರತೆ ಅರ್ಥ ಮಾಡಿಕೊಂಡು ನಶೆ ಮುಕ್ತ ಭಾರತಕ್ಕೆ ಸಂಕಲ್ಪ ಮಾಡಬೇಕು ಎಂದರು.
ವಿದ್ಯಾವಂತರೇ ಹೆಚ್ಚು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ. ಮಾದಕ ದ್ರವ್ಯಗಳಿಂದ ಯುವ ಸಮೂಹವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಆರಕ್ಷಕ ನಿರೀಕ್ಷಕ ಕೆ.ಟಿ. ರಮೇಶ್ ಮಾತನಾಡಿ, ಯುವ ಸಮುದಾಯದಲ್ಲಿ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶದಲ್ಲಿದ್ದ ಡ್ರಗ್ಸ್ ಪಿಡುಗು ಗ್ರಾಮೀಣ ಭಾಗಕ್ಕೂ ವ್ಯಾಪಿಸತೊಡಗಿದೆ. ಇವುಗಳ ಬಳಕೆಯಿಂದ ಮಾನಸಿಕ ಮತ್ತು ದೈಹಿಕ ದೌರ್ಬಲ್ಯಕ್ಕೆ ಗುರಿಯಾಗುತ್ತಾರೆ. ಡ್ರಗ್ಸ್ ಬಳಕೆ ಕಾನೂನು ಬಾಹಿರವಾಗಿದೆ. ಇದನ್ನು ತೊಡೆದು ಹಾಕಲು ಆರಕ್ಷಕರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಜಾಥಾ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 100 ವಾರಗಳ ನಶೆ ಮುಕ್ತ ವಿಕಸಿತ ಭಾರತ ಸಂಕಲ್ಪ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ನಂತರ ಅಂಬೇಡ್ಕರ್ ವೃತ್ತದಲ್ಲಿ ಮಾದಕ ವ್ಯಸನಗಳ ವಿರುದ್ಧ ಹೋರಾಟ ನಡೆಸುವ ಸಂಕಲ್ಪ ಕೈಗೊಂಡರು.
ಅಭಿಯಾನಕ್ಕೆ ಕೈ ಜೋಡಿಸಿ: ವಿಶ್ವಮಟ್ಟದಲ್ಲಿ ಭಾರತವನ್ನು ಅಸ್ಥಿರಗೊಳಿಸಲು, ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡಲು ವಿದೇಶಿ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಯುವ ಸಮೂಹವನ್ನು ವ್ಯಸನಿಗಳನ್ನಾಗಿಸುವ ಹುನ್ನಾರ ನಡೆಯತ್ತಿವೆ. ಇದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಶೆ ಮುಕ್ತ ವಿಕಸಿತ ಭಾರತ ಅಭಿಯಾನ ಎಂಬ 100 ವಾರಗಳ ಅಭಿಯಾನವನ್ನು ದೇಶದಲ್ಲಿ ಅನುಷ್ಠಾನ ಗೊಳಿಸಿದ್ದಾರೆ. ತಾಲೂಕನ್ನು ಮಾದಕ ವ್ಯಸನ ಮುಕ್ತಗೊಳಿಸುವ ಸಂಕಲ್ಪ ಮಾಡಲಾಗಿದೆ. ಯುವಕರು ಹಾಗೂ ಸಾರ್ವಜನಿಕರು ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಅಭಿಯಾನದ ಸಂಘಟಕ, ಟ್ರಸ್ಟ್ ಕಾರ್ಯದರ್ಶಿ ಎಸ್. ಕಲ್ಮಠ ಮನವಿ ಮಾಡಿದರು.
ಎಸ್‌ಎನ್‌ಇಆರ್‌ಡಿ ಟ್ರಸ್ಟ್ ಅಧ್ಯಕ್ಷ ಎಂ. ಶಿವಲಿಂಗಪ್ಪ, ಪುರಸಭೆ ಮಾಜಿ ಉಪಾಧ್ಯಕ್ಷೆ ವಿಜಯಮ್ಮ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ತಿಪ್ಪೇಸ್ವಾಮಿ, ಪಿ.ಎಲ್. ಲೋಕೇಶ್ವರ್, ನವೀನ್ ಕುಮಾರ್, ನಿಸಾರ್ ಅಹ್ಮದ್, ಪ್ರಾಚಾರ್ಯ ಟಿ. ಬಸಪ್ಪ, ಸಿದ್ಧರಾಮೇಶ್, ವೀರೇಶ್ ಇತರರು ಇದ್ದರು.