ಭರಮಸಾಗರದಲ್ಲಿ ಸಚಿವ ಟಿ. ರಘುಮೂರ್ತಿ ನೂತನ ಪೊಲೀಸ್ ಠಾಣೆ ಕಟ್ಟಡ ಲೋಕಾರ್ಪಣೆಗೊಳಿಸಿದರು. Inauguration
ಚಿತ್ರದುರ್ಗ

ಆರಕ್ಷಕ ಠಾಣೆ ನೆಮ್ಮದಿ, ಭದ್ರತೆ ತಾಣ

ಸಚಿವ ಟಿ. ರಘುಮೂರ್ತಿ ಆಶಯ, 2 ಕೋಟಿ ವೆಚ್ಚದ ಪೊಲೀಸ್ ಠಾಣೆ ಲೋಕಾರ್ಪಣೆ

ಭರಮಸಾಗರ: ಪೊಲೀಸ್ ಠಾಣೆ ಸಾರ್ವಜನಿಕರಿಗೆ ನೆಮ್ಮದಿ, ಭದ್ರತೆ ನೀಡುವ ತಾಣಗಳಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಆಶಿಸಿದರು.

ಪಟ್ಟಣದಲ್ಲಿ ಪೊಲೀಸ್ ಇಲಾಖೆ, ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಹೊಸದಾಗಿ ನಿರ್ಮಿಸಿರುವ ಗ್ರೇಡ್-5 ಪೊಲೀಸ್ ಠಾಣೆ ಕಟ್ಟಡವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಅಭಿವೃದ್ಧಿ ಕಾರ್ಯಗಳ ಜತೆಗೆ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಮುಖ್ಯ. ಕಾನೂನು ಪಾಲನೆ ಹಾಗೂ ಜನರ ರಕ್ಷಣೆ ಮಾಡುವುದು ಪೊಲೀಸ್ ಇಲಾಖೆ ಕರ್ತವ್ಯವಾಗಿದೆ ಎಂದರು.

ಪೊಲೀಸ್ ಠಾಣೆ ಎಂದರೆ ಶಿಕ್ಷೆ ನೀಡುವ ಕೇಂದ್ರವಲ್ಲ, ಜನರಿಗೆ ಭದ್ರತೆ, ಕಾನೂನಿನ ರಕ್ಷಣೆ ನೀಡುವ ತಾಣವಾಗಬೇಕು. ಠಾಣೆಗೆ ಬರುವ ದೂರುಗಳನ್ನು ರಾಜೀ ಮೂಲಕ ಬಗೆಹರಿಸಲು ಆದ್ಯತೆ ನೀಡಬೇಕು. ಪ್ರಕರಣಗಳು ಅನಗತ್ಯವಾಗಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಉತ್ತಮವಾಗಿದೆ. ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲರೂ ಸಹಕರಿಸಬೇಕು. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಪಕ್ಷಾತೀತವಾಗಿ ನಡೆಯಲು ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಸಿದ್ಧಾಂತಗಳು ಬೇರೆ ಇರಬಹುದು. ಆದರೆ, ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಭರಮಸಾಗರ ಭಾಗದ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ನೀರು ಹರಿದುಬರುತ್ತಿರುವುದು ಸಂತಸದ ಸಂಗತಿ. ಸಿರಿಗೆರೆ ಶ್ರೀಗಳ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಈ ಭಾಗದ ಕೆರೆಗಳಿಗೆ ನೀರು ತಲುಪುತ್ತಿರುವುದು ರೈತರಿಗೆ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ. ಎಂ. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಬಿ.ರಘು, ಎಸ್‌ಎಂಎಲ್ ತಿಪ್ಪೇಸ್ವಾಮಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷ ನಿರಂಜನಮೂರ್ತಿ, ಜಿಲ್ಲಾಧಿಕಾರಿ ಎಸ್. ರಮ್ಯಾ, ಎಎಸ್‌ಪಿ ಶಿವಕುಮಾರ್, ಇಂಜಿನಿಯರ್ ಯೋಗೇಂದ್ರಪ್ಪ ಇದ್ದರು.

ಐತಿಹಾಸಿಕ ಠಾಣೆ

ಭರಮಸಾಗರ ಪೊಲೀಸ್ ಠಾಣೆ 1938ರಿಂದ ಕಾರ್ಯನಿರ್ವಹಿಸುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭವಾದ ಐತಿಹಾಸಿಕ ಠಾಣೆಯಾಗಿದೆ. ಈ ಠಾಣೆ ವ್ಯಾಪ್ತಿಗೆ ಸುಮಾರು 100 ಗ್ರಾಮ ಒಳಪಡುತ್ತವೆ. ಪ್ರತಿವರ್ಷ 600ಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿವೆ ಎಂದು ಎಸ್ಪಿ ಕುಶಲ್ ಚೌಕ್ಸೆ ಹೇಳಿದರು. ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವುದರಿಂದ ಈ ಭಾಗದಲ್ಲಿ ರಸ್ತೆ ಅಪಘಾತ ಹೆಚ್ಚಾಗಿ ಸಂಭವಿಸುತ್ತಿವೆ. ವಿಶೇಷವಾಗಿ ಮಾರಣಾಂತಿಕ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಕಳ್ಳತನ ಪ್ರಕರಣಗಳೂ ವರದಿಯಾಗುತ್ತಿದ್ದು, ಅಪಘಾತ ಮತ್ತು ಅಪರಾಧ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ತಿಳಿಸಿದರು. ನೂತನ ಪೊಲೀಸ್ ಠಾಣೆ ಕಟ್ಟಡ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ನಾಲ್ವರು ಪಿಎಸ್‌ಐ, ಆರು ಮಂದಿ ಎಎಸ್‌ಐ ಹಾಗೂ ಹೆಡ್‌ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್ ಸೇರಿ ಒಟ್ಟು 67 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. 2 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಉದ್ಯಾನವನ, ಬ್ಯಾರಿಕೇಡ್ ನಿರ್ಮಾಣಕ್ಕೆ ಜಾನ್‌ಮೇನ್ಸ್ , ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಕಾರ ನೀಡಿವೆ ಎಂದರು.

ಜಿಲ್ಲೆಯ ಜನರ ಬಹುದಿನಗಳ ಕನಸಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಗೆ ನೀರು ಹರಿದುಬಂದಿದೆ. ನಮಗೆ ಅಗತ್ಯವಿದ್ದ ಮೂರು ಟಿಎಂಸಿ ನೀರು ದೊರೆತಿದೆ. ಇನ್ನೂ ಒಂದು ಟಿಎಂಸಿ ನೀರು ಒದಗಿಸುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶಿಸಿದ್ದಾರೆ.
ರಘುಮೂರ್ತಿ ಸಚಿವ