ಹೊಸದುರ್ಗ: ಗ್ರಂಥಾಲಯಗಳು ಜ್ಞಾನವೃದ್ಧಿ, ಓದುವ ಹವ್ಯಾಸ, ಸಮಯದ ಸದುಪಯೋಗ, ಮಾನಸಿಕ ವಿಕಾಸ, ನಾಗರಿಕ ಪ್ರಜ್ಞೆ ಹಾಗೂ ಆಧುನಿಕ ತಂತ್ರಜ್ಞಾನದ ಅರಿವಿಗೆ ತುಂಬಾ ಸಹಕಾರಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಭಿಪ್ರಾಯಪಟ್ಟರು.
ಪಟ್ಟಣದ ಜ್ಞಾನಕೇಂದ್ರದಲ್ಲಿ ಭಾನುವಾರ ಸಂಜೆ ಕನ್ನಡ ಪುಸ್ತಕ ಪ್ರಾಧಿ ಕಾರ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಆಯೋಜಿಸಿದ್ದ ಮನೆ ಗೊಂದು ಗ್ರಂಥಾಲಯಗಳ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪುಸ್ತಕಗಳು ಬದುಕಿನ ಅಮೂಲ್ಯನಿಧಿ ಹಾಗೂ ಸಂಸ್ಕೃತಿಯ ಪ್ರತೀಕಗಳಾಗಿ ಕಾರ್ಯನಿರ್ವಹಿಸುತ್ತವೆ. ಸಮಾಜದ ಸರ್ವತೋಮುಖ ಬೆಳವಣಿಗೆ ಹಾಗೂ ವ್ಯಕ್ತಿಯ ಬೌದ್ಧಿಕ ವಿಕಾಸಕ್ಕೆ ಗ್ರಂಥಾಲಯ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಜಾಗೃತಿ ಸಮಿತಿ ನೇತೃತ್ವದಲ್ಲಿ ಮನೆ ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಮನೆಯಲ್ಲಿ ಪುಸ್ತಕಗಳಿದ್ದರೆ ಗೌರವ ಹೆಚ್ಚಲಿದೆ ಎಂದರು.
ಚಿಂತಕ ಡಾ.ಎ. ಮೋಹನ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಪರಂಪರೆಯಿದೆ. ಚಿಂತನೆ, ಸಾಮಾಜಿಕ ಮೌಲ್ಯ, ಮಾನವೀಯತೆ ಆಶಯ ಸಾಹಿತ್ಯಕ್ಕಿದ್ದು, ಸಾಂಸ್ಕೃತಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ನಿರಂಜನ ದೇವರ ಮನೆ ಮಾತನಾಡಿ, ಪುಸ್ತಕ ಜ್ಞಾನ ವಿತರಣೆಯ ಪ್ರಮುಖ ಮಾಧ್ಯಮ ವಾಗಿದ್ದು, ಮನೆಗಳಲ್ಲಿ ಓದುವ ಅಭಿರುಚಿ ಬೆಳೆಸುವ, ಜನಜೀವನದ ಭಾಗವಾಗಿಸುವ ಆಶಯ ಜಾಗೃತಿ ಸಮಿತಿಯದ್ದಾಗಿದೆ ಎಂದರು.
ಗ್ರಂಥಾಲಯ ಅನುಷ್ಠಾನಗೊಳಿಸಿದ ಕೆ. ರುಕ್ಮಿಣಿ ಬಿಲ್ಲಪ್ಪ, ಡಾ. ಮಂಜಪ್ಪ ಮಾಗೊದಿ, ಎಚ್.ಎಸ್. ನವೀನಕುಮಾರ್, ಬಿ.ಪಿ. ಓಂಕಾರಪ್ಪ, ಇಲ್ಕಲ್ ಅಶೋಕ್ ಅವರನ್ನು ಅಭಿನಂದಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಂ.ಆರ್. ಶಾಂತಪ್ಪ, ಶೋಭಾ ಪ್ರಕಾಶ್, ಎಂ.ಎಸ್. ರಮೇಶ್, ನಿಸಾರ್‌ಅಹಮ್ಮದ್, ನಾಗತೀಹಳ್ಳಿ ಮಂಜುನಾಥ್, ಕೆ.ಸಿ. ರುದ್ರೇಶ್, ಬಿ.ಕೆ. ನಾಗರಾಜಪ್ಪ ಇತರರಿದ್ದರು.
ಜೀವನಕ್ಕೆ ಸ್ಫೂರ್ತಿ ನೀಡುವ ಮತ್ತು ಬದುಕನ್ನು ಪರಿವರ್ತನೆ ಮಾಡುವ ಗುಣ ಪುಸ್ತಕಗಳಿಗಿದೆ. ಸರ್ವೋದಯದ ಆಶಯದೊಂದಿಗೆ ಮಾನವ ಪರಿಪೂರ್ಣನಾಗಬೇಕಾದರೆ ಪುಸ್ತಕ ಸಂಸ್ಕೃತಿ ಮುಖ್ಯವಾಗಿದೆ. ಪುಸ್ತಕಗಳು ಡಿಜಿಟಲ್ ಯುಗದಲ್ಲಿ ಮಕ್ಕಳ ಭವಿಷ್ಯಕ್ಕೆ ಜ್ಞಾನದ ಹೂಡಿಕೆಯಾಗಿ ನಾಡಿನ ಸಂಸ್ಕೃತಿಯ ನಿಧಿಯಾಗಿವೆ. ಮನೆಗಳಲ್ಲಿ ಸಣ್ಣ ಗ್ರಂಥಾಲಯ ಸ್ಥಾಪಿಸುವುದು ಉತ್ತಮವಾದ ಹವ್ಯಾಸ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.