Nayakanahatti: ನಾಯಕನಹಟ್ಟಿಯಲ್ಲಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಕಾರ್ತೀಕೋತ್ಸವ ಪ್ರಯುಕ್ತ ಗುರುವಾರ ಸಂಜೆ ಲಕ್ಷ ದೀಪೋತ್ಸವ ನೆರವೇರಿತು. 
ಚಿತ್ರದುರ್ಗ

Nayakanahatti: ನಾಯಕನಹಟ್ಟಿಯಲ್ಲಿ ವೈಭವದ ಲಕ್ಷದೀಪೋತ್ಸವ

ಪ್ರಮುಖ ಮುಖ್ಯಾಂಶಗಳು

  • ದೇವಾಲಯದ ಪ್ರಾಂಗಣದಲ್ಲಿ ಬೆಳ್ಳಿ ತೇರು
  • 1 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿದ ಭಕ್ತರು
  • ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರಿಂದ ಚಾಲನೆ
ನಾಯಕನಹಟ್ಟಿ: ಮಧ್ಯಕರ್ನಾಟಕದ ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷದೀಪೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಉತ್ಸವಕ್ಕೆ ಬೆಳಗ್ಗೆಯಿಂದಲೇ ಸಿದ್ಧತೆಯಲ್ಲಿ ತೊಡಗಿದ ಭಕ್ತರು ಸಂಜೆ 7.30ಕ್ಕೆ ಗ್ರಾಮಸ್ಥರು, ದೈವಸ್ಥರ ಸಮ್ಮುಖದಲ್ಲಿ ಅರ್ಚಕ ರವಿಕುಮಾರ್ ಆಕಾಶದೀಪ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಗುರುತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ, ಈಶ್ವರ ದೇವಾಲಯ, ದೊಡ್ಡರಥ, ನಾಗರಕಟ್ಟೆ, ಏಕಾಂತಮಠ, ಅಂಬೇಡ್ಕರ್ ನಗರದ ವೆಂಕಟೇಶ್ವರ ದೇವಾಲಯ ಸೇರಿ ಪಟ್ಟಣದ ಹಲವು ದೇವಾಲಯಗಳ ಬಳಿ ಸುಮಾರು 1 ಲಕ್ಷಕ್ಕೂ ದೀಪಗಳನ್ನು ಬೆಳಗಿಸಿದರು.
ಪಟ್ಟಣದ ಒಳಮಠ, ಹೊರಮಠ, ಈಶ್ವರ ದೇವಾಲಯ, ಏಕಾಂತಮಠದ ಗೋಪುರಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದವರು ಇರಿಸಿದ್ದ ದೀಪದ ಕಂಬಗಳಲ್ಲಿ ಭಕ್ತರು ದೀಪಗಳನ್ನು ಹಚ್ಚಿದರು.

ಬೆಳ್ಳಿ ರಥೋತ್ಸವ

ರಾತ್ರಿ 8ಕ್ಕೆ ಬೆಳ್ಳಿರಥೋತ್ಸವ ನಡೆಯಿತು. ದೇವಾಲಯ ಆವರಣದಲ್ಲಿ ಬೆಳ್ಳಿರಥವನ್ನು ಅಲಂಕಾರ ಮಾಡಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಒಳಮಠದ ಪ್ರಾಂಗಣದಲ್ಲಿ ರಥೋತ್ಸವ ನೆರವೇರಿಸಲಾಯಿತು. ಕರಡಿಮಜಲು, ನಂದಿಧ್ವಜ ಕುಣಿತ, ಜಾನಪದ ವಾದ್ಯಗಳು ಮೆರಗು ನೀಡಿದವು.
ಕಾರ್ತಿಕ ಮಾಸದಲ್ಲಿ ದೇವರ ಸನ್ನಿಧಿಯಲ್ಲಿ ದೀಪಗಳನ್ನು ಹಚ್ಚುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ಹಲವು ದಶಕಗಳಿಂದ ಲಕ್ಷ ದೀಪೋತ್ಸವ ಸೇವೆ ನಡೆಸಿಕೊಂಡು ಬರಲಾಗಿದೆ. ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಇಒ ಗಂಗಾಧರಪ್ಪ, ಡಿವೈಎಸ್‌ಪಿ ಸತ್ಯನಾರಾಯಣರಾವ್, ಪಪಂ ಸದಸ್ಯರಾದ ಜೆ.ಆರ್. ರವಿಕುಮಾರ್, ತಿಪ್ಪೇಸ್ವಾಮಿ, ವಿನುತಾ, ಎನ್. ಮಹಾಂತಣ್ಣ, ಗ್ರಾಮದ ಮುಖಂಡರಾದ ಎಂವೈಟಿ ಸ್ವಾಮಿ, ಕೆ.ಎನ್. ತಿಪ್ಪೇರುದ್ರಪ್ಪ, ಜೆ.ಪಿ. ರವಿಶಂಕರ, ಗಿರಿಯಪ್ಪ, ಜಿ.ಟಿ. ದೇವರಾಜ್, ಉಮೇಶ, ದೈವಸ್ಥರು, ನಿವೃತ್ತ ತಹಸೀಲ್ದಾರ್ ಎನ್. ರಘುಮೂರ್ತಿ ದೇವಸ್ಥಾನದ ಸಿಬ್ಬಂದಿ, ಪಿಎಸ್‌ಐ ಜಿ. ಪಾಂಡುರಂಗ, ಪೊಲೀಸ್ ಸಿಬ್ಬಂದಿ ಇದ್ದರು.

ನೃತ್ಯ ನಿಕೇತನ ಶಾಲಾ ಮಕ್ಕಳಿಂದ ನೃತ್ಯ

ಲಕ್ಷ ದೀಪೋತ್ಸವ ನಿಮಿತ್ತ ಚಳ್ಳಕೆರೆ ನೃತ್ಯ ನಿಕೇತನ ಭರತ ನಾಟ್ಯ ಶಾಲಾ ಮಕ್ಕಳಿಂದ ಭರತ ನಾಟ್ಯ ಕಲಾ ಪ್ರದರ್ಶನ ನಡೆಯಿತು. ಶಾಲೆ ಮುಖ್ಯಸ್ಥೆ ಸುಧಾಮೂರ್ತಿ, ಮಕ್ಕಳು ಇದ್ದರು.