ಪ್ರಮುಖ ಮುಖ್ಯಾಂಶಗಳು
ಕನಕ ಗುರು ಪೀಠದ ಆವರಣದಲ್ಲಿ ಕೃಷಿ ಮೇಳದ ಅಂಗವಾಗಿ ರೈತರಿಗೆ ಉಪಯುಕ್ತ ಕೃಷಿ ಪರಿಕರಗಳು, ಬೀಜ, ಗೊಬ್ಬರ, ಅತ್ಯಾಧುನಿಕ ಕೃಷಿ ಸಲಕರಣೆಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು.
ಶಾಸಕ ಬಿ.ಜಿ. ಗೋವಿಂದಪ್ಪ ಕೃಷಿ ಮೇಳಕ್ಕೆ ಚಾಲನೆ ನೀಡಿ ಗಣ್ಯರೊಂದಿಗೆ ಪ್ರದರ್ಶನ ವೀಕ್ಷಿಸಿದರು. ಕಾರ್ಯಕ್ರಮಕ್ಕೆ ಮುನ್ನ ರೈತರು ಹಾಗೂ ರೈತ ಮಹಿಳೆಯರು ಜಾಥಾ ನಡೆಸಿ ಗಮನ ಸೆಳೆದರು. ವೇದಿಕೆಯ ಮುಂಭಾಗದಲ್ಲಿ ಸಿರಿ ಧಾನ್ಯಗಳನ್ನು ಬಳಸಿ ಹಾಕಲಾಗಿದ್ದ ಬೃಹತ್ ರಂಗೋಲಿ ಜನರ ಗಮನ ಸೆಳೆಯಿತು.
ಸಿರಿಧಾನ್ಯಗಳ ಸಿರಿ ವಿಚಾರ ಸಂಕಿರಣದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ. ಬಸವಣ್ಣಪ್ಪ ಸಾವಯವ ಕೃಷಿಯ ಮಹತ್ವ ಕುರಿತು, ಬೆಂಗಳೂರು ಕೃಷಿ ವಿವಿಯ ಡಾ. ಸಂಜಯ್ ಸಮಗ್ರ ಕೃಷಿ ಪದ್ಧತಿ ಕುರಿತು ಮಾತನಾಡಿದರು. ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ತಿಪ್ಪೆಸ್ವಾಮಿ ಕುರಿ ಸಾಕಣೆ ಕುರಿತು, ಬಬ್ಬೂರು ಕೃಷಿ ಸಂಶೋಧನಾ ಸಂಸ್ಥೆಯ ಕೃಷಿ ವಿಜ್ಞಾನಿ ಡಾ.ನಂದಿನಿ ಅವರು ಸಿರಿಧಾನ್ಯಗಳಲ್ಲಿ ನೂತನ ತಾಂತ್ರಿಕತೆಗಳ ಕುರಿತು ಮಾತನಾಡಿದರು.