ಜಿಲ್ಲೆ

ಪಥ್ಯಾಹಾರ ಪರಿಶೀಲನೆಗೆ ಜಿಲ್ಲಾಸ್ಪತ್ರೆಗೆ ಬಂದ ಡಿಸಿ

Chitradurga

ಚಿತ್ರದುರ್ಗ: ತಾವು ನೀಡಿದ ಸಲಹೆ ಸೂಚನೆಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಮಂಗಳವಾರ ಮಧ್ಯಾಹ್ನ ಜಿಲ್ಲಾಸ್ಪತ್ರೆಗೆ ಹಠಾತ್ ಭೇಟಿ ನೀಡಿದರು.

ಸಾಮಾನ್ಯವಾಗಿ ಒಳರೋಗಿಗಳಿಗೆ ಬ್ರೆಡ್, ಹಾಲು, ಅನ್ನ, ಸಾಂಬಾರು, ಕಾಳು, ಸಂಜೆ ಟೀ ಇತ್ಯಾದಿ ಪೂರೈಸಲಾಗುತ್ತಿದೆ. ಆದರೆ, ಸಕ್ಕರೆ ಹಾಗೂ ರಕ್ತದೊತ್ತಡವಿರುವ ಒಳ ರೋಗಿಗಳಿಗೆ ಪಥ್ಯಾಹಾರದ ಅಗತ್ಯವಿರುತ್ತದೆ. ಅವರಿಗೆ ಅನ್ನದ ಪ್ರಮಾಣ ಕಡಿಮೆ ಮಾಡಿ, ಚಪಾತಿ ಕೊಡಿ. ಸಿಹಿ ಬ್ರೆಡ್ ಕೊಡಬೇಡಿ. ಬಾಣಂತಿಯರಿಗೆ ಗಂಜಿ, ಇಡ್ಲಿ, ಕಾಫಿ, ಬ್ರೆಡ್ ನೀಡಿ ಎಂದು ಜ.17ರಂದು ಭೇಟಿ ನೀಡಿದಾಗ ಜಿಲ್ಲಾ ಸರ್ಜನ್‌ಗೆ ಸೂಚಿಸಿದ್ದರು. ಅವುಗಳ ಪಾಲನೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಪರಿಶೀಲನೆ ನಡೆಸಿದರು.

ಜಿಲ್ಲಾ ಸರ್ಜನ್ ಕೊಠಡಿಯಲ್ಲಿ ವೈದ್ಯರ ಸಭೆ ನಡೆಸಿದರು. ಅನೇಕ ದೂರುಗಳಿದ್ದರೂ ಹೆರಿಗೆ, ಕೆಲವು ಕ್ಲಿಷ್ಟ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿರುವುದು ಗಮನಾರ್ಹ. ಇಂತಹ ಪ್ರಕರಣಗಳನ್ನು ವ್ಯಾಪಕವಾಗಿ ಪ್ರಚಾರಮಾಡಿ, ಎಂಥದ್ದೇ ಸನ್ನಿವೇಶದಲ್ಲೂ ಜಿಲ್ಲಾಸ್ಪತ್ರೆಗೆ ಬರಬೇಕೆಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಬೇಕು ಎಂದರು.

343 ಅಪೌಷ್ಟಿಕ ಮಕ್ಕಳು: ಜಿಲ್ಲೆಯಲ್ಲಿ ಆರು ತಿಂಗಳಿಂದ ಮೂರು ವರ್ಷ ವಯಸ್ಸಿನ 343 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಅಪೌಷ್ಟಿಕತೆಯಿಂದ ಜನಿಸುವ ನವಜಾತ ಶಿಶುಗಳಿಗೆ ಜಿಲ್ಲಾಸ್ಪತ್ರೆ ಎಸ್‌ಎನ್‌ಸಿಯು ವೈದ್ಯಕೀಯ ನೆರವಿದೆ. ವೈದ್ಯಕೀಯ ನೆರವಿನೊಂದಿಗೆ ಅಪೌಷ್ಟಿಕತೆ ಹೋಗಲಾಡಿಸಬೇಕಿದೆ.

ಆರು ತಿಂಗಳಿಂದ ಆರು ವರ್ಷದೊಳಗೆ ಮಗುವಿನಲ್ಲಿ ಸಾಮಾನ್ಯ ಬೆಳವಣಿಗೆ ಆಗದಿದ್ದರೆ ದೈಹಿಕ ನ್ಯೂನತೆಯ ಸಾಧ್ಯತೆ ಇದ್ದು,ನವಜಾತ ಶಿಶುಗಳೆಡೆ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ. ಸಿಟಿ ಸ್ಕಾೃನ್ ದುರಸ್ತಿ ಕುರಿತಂತೆ ಆಯುಕ್ತರು ಕಡತ ತರಿಸಿಕೊಂಡಿಸಿದ್ದಾರೆ. ತಾಯಿ ಮಗುವಿನ ಹೊಸ ಆಸ್ಪತ್ರೆ ಕಟ್ಟಡ ಕಾಮಗಾರಿ ಪರಿಶೀಲಿಸುತ್ತೇನೆ. ರೋಗಿ ಅಥವಾ ಸಂಬಂಧಿಕರಿಂದ ದೂರುಗಳ ಕೇಳಿ ಬರಬಾರದೆಂದು ತಾಕೀತು ಮಾಡಿದರು.

ಜಿಲ್ಲಾ ಸರ್ಜನ್ ಡಾ.ಎಚ್.ಜೆ.ಬಸವರಾಜಪ್ಪ, ಆರ್‌ಎಂಒ ಡಾ. ಆನಂದಪ್ರಕಾಶ್, ಡಾ.ಈ ಸತೀಶ್, ಡಾ.ದೇವರಾಜ್, ಡಾ.ಮೋಹನ್‌ಕುಮಾರ್, ಡಾ.ರೂಪಶ್ರೀ, ಡಾ.ಮಲ್ಲಪ್ಪ, ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಹಾಗೂ ವೈದ್ಯಕೀಯೇತರ ಅಧಿಕಾರಿಗಳಿದ್ದರು.