ಚಿತ್ರದುರ್ಗ: ಚಿತ್ರದುರ್ಗ ಹೊರವಲಯದ ಸೀಬಾರದಲ್ಲಿ ಶ್ರೀ ಗುರುಪಾದ ಮುರುಘ ರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮೀ ಸ್ಮರಣಾರ್ಥ ಆಯೋಜಿಸಿರುವ 65ನೇ ವರ್ಷದ ದನಗಳ ಜಾತ್ರೆಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಭಾನುವಾರ ಸಂಜೆ ಭೇಟಿ ನೀಡಿದ್ದರು.
ಜಾತ್ರೆಗೆ ಆಗಮಿಸಿದ ವಿವಿಧ ತಳಿಯ ದನಗಳ ಬಗ್ಗೆ ಮಾಹಿತಿ ಪಡೆದ ಮುರುಘಾ ಶರಣರು, ಜಾನುವಾರುಗಳ ಮೇವು, ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.
ತುಮಕೂರು, ಬೆಂಗಳೂರು, ಮಾಗಡಿ, ಮಧುಗಿರಿ, ತಮಿಳುನಾಡು,ಆಂಧ್ರ ಪ್ರದೇಶ, ವದ್ದಿನಕಲ್, ಬಳ್ಳಾರಿ, ಹೊಸಪೇಟೆ ಮತ್ತಿತರ ಕಡೆಗಳಿಂದ ಜರ್ಸಿ, ಗಿರ್, ಅಮೃತ್ ಮಹಲ್, ಹಳ್ಳಿಕಾರ, ಡಾಗಿ, ಮುದ್ರ ಸೇರಿ ಹಲವು ತಳಿಗಳ ಸಾವಿರಕ್ಕೂ ಹೆಚ್ಚು ರಾಸುಗಳು ಜಾತ್ರೆಗೆ ಬಂದಿವೆ. 50 ಸಾವಿರ ರೂ. ಗಳಿಂದ ಹಿಡಿದು 2.60 ಲಕ್ಷ ರೂ. ವರೆಗಿನ ರಾಸುಗಳು ಇಲ್ಲಿವೆ.
ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಕೆಇಬಿ ಷಣ್ಮುಖಪ್ಪ, ಗುತ್ತಿನಾಡು ಪ್ರಕಾಶ್, ಜಿ.ಎಂ.ಕುಮಾರ್, ಮುರುಗೇಶ್ ಮತ್ತಿತರರು ಇದ್ದರು. ಮುರುಘಾ ಮಠದಿಂದ ಜಾತ್ರೆ ಆಯೋಜನೆಯಾಗಿದೆ.