ಜಿಲ್ಲೆ

ಜ್ಞಾನ ವೃದ್ಧಿಗೆ ಅಂತರ್ಜಾಲ ಬಳಸಿಕೊಳ್ಳಿ

ಚಿತ್ರದುರ್ಗ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುನ್ನಡೆ ಸಾಧಿಸಲು ಪಠ್ಯದ ಜತೆಗೆ ಸಾಮಾಜಿಕ ಜಾಲತಾಣವನ್ನು ಜ್ಞಾನಾರ್ಜನೆಗೆ ಮಾತ್ರ ವಿದ್ಯಾರ್ತಿಗಳು ಬಳಸಬೇಕು ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಕಿವಿಮಾತು ಹೇಳಿದರು.

ಮುಂಬಯಿನಲ್ಲಿ ಇಂಡಿಯಾಸ್ ಫ್ಯೂಚರ್ ಟೈಕೂನ್ಸ್ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಗರದ ವಿದ್ಯಾವಿಕಾಸ ಶಾಲೆ ವಿದ್ಯಾರ್ಥಿಗಳಿಗೆ ಗುರುವಾರ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಸಂಶೋಧನೆ, ಜ್ಞಾನಾರ್ಜನೆಗೆ ಸದ್ಬಳಕೆ ಮಾಡಿಕೊಂಡರೆ ಅದ್ಭುತ ಸಾಧನೆ ಮಾಡಬಹುದು ಎಂದರು.

9ನೇ ತರಗತಿ ವಿದ್ಯಾರ್ಥಿಗಳಾದ ಜಿ.ವಿ.ನಾಗ ಅಮೃತ್, ಮಾನ್ಯಾಜೈನ್ ಹಾಗೂ 8ನೇ ತರಗತಿಯ ಎಸ್.ತೇಜಸ್ ಅವರಿದ್ದ ತಂಡ ಜ.26ರಿಂದ 28ರ ವರೆಗೆ ನಡೆದಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ, ನೀರಿನ ಮಿತ ಬಳಕೆಯ ಕೃಷಿ ಕುರಿತ ವಿಜ್ಞಾನ ಮಾದರಿ ಪ್ರದರ್ಶಿಸಿ, ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದು ಜಿಲ್ಲೆಗೆ ಹೆಮ್ಮೆ ವಿಷಯ ಎಂದು ತಿಳಿಸಿದರು.

ವಿಜೇತ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಗಣ್ಯರು ಗೌರವಿಸಿದರು. ಸಂಸ್ಥೆ ಕಾರ್ಯದರ್ಶಿ ಬಿ.ವಿಜಯ್‌ಕುಮಾರ್, ಮುಖ್ಯಶಿಕ್ಷಕ ಸಿ.ಡಿ.ಸಂಪತ್ ಕುಮಾರ್, ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಚ್‌ಎಸ್‌ಟಿ ಸ್ವಾಮಿ, ಕ್ಯಾಂಪಸ್ ಇನ್‌ಚಾರ್ಜ್ ಎಸ್.ಎಂ.ಪೃಥ್ವೀಶ್, ಹೆಡ್ ಕೋ-ಆರ್ಡಿನೇಟರ್ ಬಸವರಾಜಯ್ಯ, ವಾರ್ತಾ ಇಲಾಖೆ ಸಹಾಯಕ ವಾರ್ತಾಧಿಕಾರಿ ತುಕಾರಾಂರಾವ್ ಇತರರಿದ್ದರು.