ಜಿಲ್ಲೆ

ಪ್ರಾಣಿ-ಪಕ್ಷಿ ಮಾರಾಟಾಕ್ಕೆ ಲೈಸೆನ್ಸ್ ಕಡ್ಡಾಯ

Chitradurga

ನಾಗರಾಜ ಶ್ರೇಷ್ಠಿ ಚಿತ್ರದುರ್ಗ: ಇನ್ನು ಹೆಂಗಂದ್ರೆ ಹಂಗೆ ನಾಯಿಮರಿ, ಗಿಳಿ, ಮೊಲ, ಮೀನು ಮೊದಲಾದ ಪ್ರಾಣಿ ಪಕ್ಷಿಗಳನ್ನು ಮಾರುವಂತಿಲ್ಲ! ಮಾರಾಟಕ್ಕೂ ಮುನ್ನ ನೋಂದಣಿ ಮತ್ತು ಪರವಾನಗಿ ಪಡೆಯುವುದು ಕಡ್ಡಾಯ.

ಪ್ರಾಣಿ, ಪಕ್ಷಿ ಮಾರಾಟಗಾರರು ಮಾ.31ರೊಳಗೆ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸುವ ಜತೆಗೆ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಬೇಕು.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚನೆಯಾಗಿರುವ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆ ನಡೆಸಿ, ಈ ಸಂಬಂಧ ನೋಂದಣಿ ಹಾಗೂ ಪರವಾನಗಿ ಪಡೆಯಲು ಮಾರಾಟಗಾರರಿಗೆ ನೋಟಿಸ್ ನೀಡುವಂತೆ ರಾಜ್ಯ ಸರ್ಕಾರ ಪಶುಪಾಲನೆ ಇಲಾಖೆಗೆ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಪಶುಪಾಲನೆ ಇಲಾಖೆ ಆಯುಕ್ತರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಲು ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

ನಾಯಿಗಳ ತಳಿ ಸಂವರ್ಧನೆ, ಮುದ್ದಿನ ಪ್ರಾಣಿಗಳ ಮಾರಾಟ ಚಟುವಟಿಕೆಯಲ್ಲಿ ತೊಡಗಿದವರು ನಿಗದಿತ ಅವಧಿಯೊಳಗೆ ನೋಂದಾಯಿಸದಿದ್ದರೆ ಹಾಗೂ ಪರವಾನಗಿ ಪಡೆಯದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರನ್ವಯ ಹಾಗೂ ನಾಯಿಗಳ ತಳಿ ಸಂವರ್ಧನೆ, ಮಾರಾಟ ನಿಯಮ 2017 ಮತ್ತು ಮುದ್ದಿನ ಪ್ರಾಣಿಗಳ ಮಳಿಗೆ ನಿಯಮ 2018ರಡಿ ಶಿಸ್ತು ಕ್ರಮಕ್ಕೆ ಜಿಲ್ಲೆಗಳಲ್ಲಿರುವ ಎಸ್‌ಪಿಸಿಎ ಗೆ ಅವಕಾಶವಿದೆ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಅಂಶಗಳ ಬಗ್ಗೆ ಚರ್ಚಿಸಲಾಗಿದೆ.

ಜಿಲ್ಲೆಯ ಪೆಟ್‌ಶಾಪ್, ಡಾಗ್ ಬ್ರೀಡಿಂಗ್ ಆ್ಯಂಡ್ ಮಾರ್ಕೆಟಿಂಗ್‌ನಲ್ಲಿರುವವರ ಸಮೀಕ್ಷೆ ನಡೆಸಲಾಗಿದೆ. ಸದ್ಯ ನಗರದಲ್ಲಿ ಐದು ಪೆಟ್ ಶಾಪ್, 21 ನಾಯಿ ತಳಿ ಸಂವರ್ಧನೆ ಮತ್ತು ಮಾರಾಟಗಾರರನ್ನು ಗುರುತಿಸಲಾಗಿದೆ.

ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ‌್ಯದರ್ಶಿ ಡಾ.ಕೃಷ್ಣಪ್ಪ ಹೇಳಿಕೆ: ನಿಗದಿತ ಮಾರ್ಗಸೂಚಿ ಪ್ರಕಾರವೇ ಪೆಟ್‌ಶಾಪ್ ಹಾಗೂ ನಾಯಿ ತಳಿ ಸಂವರ್ಧನಾ ಕೇಂದ್ರದ ಚಟುವಟಿಕೆಗಳಿರಬೇಕು.ಉಲ್ಲಂಘಿಸಿದರೆ ನೋಂದಣಿ ಹಾಗೂ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ.